ಭಟ್ಕಳ : 75 ನೇ ಸ್ವಾತಂತ್ರ್ಯ ದಿನಾಚರಣೆ: 307 ಆರೋಪಿಗಳಿಗೆ ಶಾಸಕ ಸುನೀಲ್ ನಾಯ್ಕ ಸನ್ಮಾನ

ಕಾರವಾರ : ಭಟ್ಕಳ ತಾಲೂಕಿನಲ್ಲಿ ಮಾಧ್ಯಮದವರೊಬ್ಬರ ಮೇಲೆ ಕೊಲೆ ಯತ್ನ ನಡೆಸಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿಗಳನ್ನು ತಾಲೂಕಾಡಳಿತದ ಮೂಲಕ ಶಾಸಕ ಸುನೀಲ್ ನಾಯ್ಕ ಮುಂದೆ ನಿಂತು ಸನ್ಮಾನಿಸಿದ್ದಾರೆ. ಈ ಮೂಲಕ ತಾಲೂಕಾಡಳಿತವೇ ಆರೋಪಿತರ ಬೆನ್ನಿಗೆ ನಿಂತಿದೆ ಎಂಬ ಊಹಾಪೋಹ ತಾಲೂಕಿನಲ್ಲಿ ಹರಿದಾಡುತ್ತಿದೆ.
ಭಟ್ಕಳ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಲೇ ಹೋಗುತ್ತಿದ್ದು,ಇದನ್ನು ಪ್ರಶ್ನಿಸಿದ ಸಾರ್ವಜನಿಕರು ಹಾಗೂ ಮಾಧ್ಯಮದವರು ಎಂಬ ಕನಿಷ್ಠ ಮರ್ಯಾದೆಯು ಇಲ್ಲದೆ ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮತ್ತು ಕೊಲೆಯ ಪ್ರಯತ್ನ ನಡೆಯುತ್ತಲೆ ಬರುತ್ತಿದೆ.ಇದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಹಿಂದೆ ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಸವಿತಾ ಕಾಮತ್ ಅವರು ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ವೀಕೆಂಡ್ ಕರ್ಪ್ಯೂ ಇರುವ ದಿನ ನಾಗರಿಕ ಸೇವಾ ನಿಯಮಾವಳಿಗೆ ವಿರುದ್ದವಾಗಿ ತಮ್ಮ 50 ನೇ ವರ್ಷದ ಹುಟ್ಟುಹಬ್ಬವನ್ನು ಕಾನೂನು ನಿಯಮಾವಳಿಯನ್ನು ಮುರಿದು ಆಚರಿಸಿಕೊಂಡಿದ್ದಾರೆ.
ಇದನ್ನು ಭಟ್ಕಳ ತಾಲೂಕಿನ ಖಾಸಗಿ ಸುದ್ದಿವಾಹಿನಿಯಲ್ಲಿ ವರದಿಯೊಂದನ್ನು ಬಿತ್ತರಿಸಿತ್ತು. ಇದನ್ನೆ ಮಹಾ ಅಪರಾಧ ಎಂಬಂತೆ ಸಂಪಾದಕರನ್ನು ನಕಲಿ ಪತ್ರಕರ್ತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದಲ್ಲದೆ ಸಂಪಾದಕರ ಮೇಲೆ ಇದೆ ಸವಿತಾ ಕಾಮತ್ ಅವರ ಸಮರ್ಥಕರಾದ ಐವರು ಅವರ ಮನೆಗೆ ಹೋಗಿ ಕೊಲೆಯ ಯತ್ನ ನಡೆಸಿದ್ದರು. ಈ ಬಗ್ಗೆ ಸಂಪಾದಕರು ಐವರ ಮೇಲೆ ಕೊಲೆ ಪ್ರಯತ್ನ, 307 ಸೇರಿದಂತೆ ಇತರ ಪ್ರಕರಣ ದಾಖಲಿಸಿರುತ್ತಾರೆ. ನಂತರದ ದಿನಗಳಲ್ಲಿ ಈ ಐವರು ಆರೋಪಿತರು ಕೋರ್ಟಿನಿಂದ ಷರತ್ತು ಬದ್ದ ಜಾಮೀನನ್ನು ಪಡೆದಿರುತ್ತಾರೆ.
ಹೀಗಿರುವಾಗ ಆಗಷ್ಟ್ 15 ರ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಟ್ಕಳ ತಾಲೂಕಾಡಳಿತವು ಕೊಲೆ ಪ್ರಯತ್ನ ನಡೆಸಿದವರಾದ ಶ್ರೀಕಾಂತ ನಾಯ್ಕ, ವಿವೇಕ್ ನಾಯ್ಕ, ಈಶ್ವರ ಕೆ.ನಾಯ್ಕ, ಈಶ್ವರ ನಾಯ್ಕ, ಆಸರಕೇರಿ ಪಾಂಡು ನಾಯ್ಕ ಇವರನ್ನು 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಟ್ಕಳ ತಾಲೂಕಾಡಳಿತದ ವತಿಯಿಂದ ಸ್ವತಃ ಶಾಸಕ ಸುನೀಲ್ ನಾಯ್ಕ ಮುಂದೆ ನಿಂತು ಸನ್ಮಾನವನ್ನು ಮಾಡಿದ್ದಾರೆ. ಅಲ್ಲಿಗೆ ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಇತಿಹಾಸದ ಅಮೃತ ಘಳಿಗೆಯಂದೆ ತಾಲೂಕಾಡಳಿತ ಆರೋಪಿತರ ಬೆಂಬಲಕ್ಕೆ ನಿಂತಂತಾಗಿದೆ. ತಾಲೂಕಿನಲ್ಲಿ ಬಡ ಅಮಾಯಕರು ಒಂದು ವೇಳೆ ತಿಳಿಯದೆ ತಪ್ಪು ಮಾಡಿದ್ದರೆ ಅವರ ಮೇಲೆ ದಬ್ಬಾಳಿಕೆಯನ್ನು ನಡೆಸಲಾಗುತ್ತದೆ. ಕಾನೂನಿನ ಮೂಲಕ ನಿರ್ಧಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ ರಾಜಕೀಯ ಬೆಂಬಲಿತರು ಕೊಲೆಗೆ ಪ್ರಚೋದನೆ ಕೊಡುವುದು ಹಾಗೂ ಕೊಲೆಗೆ ಪ್ರಯತ್ನಿಸುವ ಮಹಾ ಅಪರಾಧವನ್ನು ನಡೆಸಿದರೂ ಕೂಡಾ ಅವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಬದಲಾಗಿ ಸ್ವತಃ ತಾಲೂಕಾಡಳಿತವೆ ಮುಂದೆ ನಿಂತು ಅರೋಪಿತರಿಗೆ ಸನ್ಮಾನವನ್ನು ಮಾಡುತ್ತದೆ ಎಂದರೆ ತುಂಬ ನಾಚಿಕೆಗೇಡಿನ ಸಂಗತಿಯಾಗಿದೆ.




