ಮೈಸೂರಿನಲ್ಲಿ ಮ್ಯಾರಥಾನ್ ಗೆ ಶಾಸಕ ರಾಮದಾಸ್ ಚಾಲನೆ

ಮೈಸೂರು: ಮೈಸೂರಿನಲ್ಲಿ ಸೋನೆ ಮಳೆಯ ನಡುವೆಯೇ ಸೆಲೆಬ್ರೇಷನ್ ರನ್ ಸರಣಿಯ ಭಾಗವಾಗಿ, ಲೈಫ್ ಈಸ್ ಕಾಲಿಂಗ್ ಎಂಬ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ವತಿಯಿಂದ ಇಂದು ಬೆಳಗ್ಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.
ನಗರದ ಅರಮನೆಯ ಬಲರಾಮ ಗೇಟ್ನಿಂದ ಮ್ಯಾರಥಾನ್ನ 11 ನೇ ಆವೃತ್ತಿಯನ್ನು ಆಯೋಜಿಸಲಾಗಿದ್ದು, ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೈಸೂರಿನ ಅರಮನೆ ದ್ವಾರದಿಂದ ವಿಶೇಷವಾಗಿ ಶಾಂತಿಗೋಸ್ಕರ ಪ್ರಧಾನಮಂತ್ರಿಗಳ ಆಸೆಯ ರೀತಿಯಲ್ಲಿ ಫಿಟ್ ಇಂಡಿಯಾದ ಚಿಂತನೆಗೆ ಪೂರಕವಾಗಿ ಸಂದೇಶ ಕೊಡುವ ಈ ಕಾರ್ಯದಲ್ಲಿ ಭಾಗವಹಿಸಿರುವ ನಿಮಗೆಲ್ಲರಿಗೂ ಅಭಿನಂದನೆಗಳು. ಭಾರತವನ್ನು ವಿಶ್ವಗುರು ಮಾಡಬೇಕೆಂಬ ಕಲ್ಪನೆ ಇಟ್ಟುಕೊಂಡಿದ್ದೇವೆ ಎಂದರು.
ಮಾನಸಿಕ ದೃಢತೆಯೊಂದಿಗೆ ದೈಹಿಕ ಫಿಟ್ ನೆಸ್ ಕೂಡಾ ಬಹು ಮುಖ್ಯವಾದದ್ದು, ಜೀವನವನ್ನು ನಾವು ಎಲ್ಲೋ ಪ್ರಾರಂಭಿಸುತ್ತೇವೆ ಆದರೆ ಎಲ್ಲಿ ಅಂತ್ಯ ಮಾಡಬೇಕೆಂದು ನಾವು ನಿರ್ಧಾರ ಮಾಡಬೇಕು ಎಂದು ತಿಳಿಸಿದರು.
ವಿಶೇಷವಾಗಿ 42, 30, 20 ,10 ಹಾಗೂ 5 ಕಿ.ಮಿ ಶಾಂತಿಗಾಗಿ ರನ್ ಮಾಡುತ್ತಿರುವುದು ಸಂತಸದ ವಿಷಯವಾಗಿದೆ, 11 ವರ್ಷದ ಹಿಂದೆ ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಚಾಲನೆ ನೀಡಿದ್ದೆ ಅಂದಿನಿಂದ ಇಂದಿನವರೆಗೂ ಕೂಡಾ ಇದು ನಿರಂತರವಾಗಿ ನಡೆದುಕೊಂಡು ಬಂದಿರುವುದು ಪ್ರಶಂಸನೀಯ ಎಂದರು.




