ಚಾಕು ಚುಚ್ಚಿ ದುಷ್ಕರ್ಮಿಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೇ ಯುವಕ ಸಾವು…!

ದಾವಣಗೆರೆ: ಕೆಲಸದಿಂದ ವಾಪಸ್ ಬರುತ್ತಿದ್ದ ವೇಳೆ ಯುವಕನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ಬಗಿರಿ ತಾಲೂಕಿನ ಜಕ್ಕಲಿ ಸೇತುವೆ ಬಳಿ ಸಂಭವಿಸಿದೆ.
ದೊಡ್ಡಮಲ್ಲಾಪುರ ಗ್ರಾಮದ 23 ವರ್ಷದ ಅಂಜಿನಪ್ಪ ಕೊಲೆಯಾದವರು. ಅವರು ತನ್ನ ಚಿಕ್ಕಪ್ಪ ಕರಿಯಪ್ಪ ಅವರ ಜೊತೆಗೆ ಅಡಿಕೆ ಖೇಣಿ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ ಬರುವಾಗ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಇದರಿಂದ ಅಂಜಿನಪ್ಪ ಗಾಯಗೊಂಡಿದ್ದರು.
ಘಟನೆ ಹಿನ್ನೆಲೆ ಏನು…?
ಬುಧವಾರ ಬೆಳಿಗ್ಗೆ ಕರಿಯಪ್ಪ ಮತ್ತು ಅಂಜಿನಪ್ಪ ಅವರು ಕೂಲಿಕಾರರಾದ ಚನ್ನಾಪುರ ಗ್ರಾಮದ ರಂಜಿತ್, ಸೋಮ್ಲಾಪುರದ ಗೋವಿಂದಪ್ಪ, ದೊಡ್ಡಮಲ್ಲಾಪುರ ಗ್ರಾಮದ ಲೋಕಪ್ಪ ಅವರೊಂದಿಗೆ ಜಕ್ಕಲಿ ಗ್ರಾಮದ ಯತೀಶ ಅವರ ಖೇಣಿ ಮನೆಗೆ ಹೋಗಿ ಅಡಿಕೆ ಕೆಲಸಕ್ಕೆ ಹೋಗಿದ್ದರು. ರಾತ್ರಿ ಅಂಜಿನಪ್ಪ ವಾಪಸ್ಸಾಗುತ್ತಿದ್ದಾಗ ಯಾರೋ ಹೊಡೆದು, ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಂಜಿನಪ್ಪ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅಂಜಿನಪ್ಪ ಅವರ ತಮ್ಮ ಪ್ರವೀಣ ನೀಡಿದ ದೂರಿನಂತೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




