ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆಂದು ಈಶ್ವರಪ್ಪನವರು ಅಭಿಮಾನ ಪೂರ್ವಕವಾಗಿ ಹೇಳಿರಬಹುದು: ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ: ಈಶ್ವರಪ್ಪ ನವರು ಅಭಿಮಾನ ಪೂರ್ವಕವಾಗಿ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ ಎನ್ನುವ ಮಾತನ್ನು ಹೇಳಿರಬಹುದು. ಅವರು ಹೇಳಿದ್ದಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತ ನಮ್ಮ ಹಿರಿಯ ಸಹೋದರರಂತಿರುವ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಳ್ಳೆಯ ಕೆಲಸಗಳನ್ನು ಮಾಡ್ತಿದಾರೆ. ನಮ್ಮ ಗುರಿ 2023ಕ್ಕೆ 150 ಸೀಟ್ ಗೆದ್ದು ಬಿಜೆಪಿ ಸರ್ಕಾರ ಬರಬೇಕೆನ್ನುವುದು 2024ರಲ್ಲಿ 28 ರ ಪೈಕಿ ಹೆಚ್ಚಿನ ಲೋಕಸಭಾ ಸ್ಥಾನ ಗೆಲ್ಲುವ ಗಮನ ಹರಿಸುವುದು ನಮ್ಮ ಕರ್ತವ್ಯ. ಸಿಎಂ ಅವರು ನಮಗೆ ಸಹಾಯ, ಸಹಕಾರ ಕೊಡ್ತಿದಾರೆ .ಯಾವುದೇ ರೀತಿಯ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ. ನಾವು ಒಟ್ಟಾಗಿದೇವೆ, ಬಿಜೆಪಿ ಒಟ್ಟಾಗಿದೆ ಎಂದರು.
2023ರಲ್ಲಾದ್ರೂ ಸಿಎಂ ಆಗಬಹುದಾ ನಿರಾಣಿ ಎಂಬ ಪ್ರಶ್ನೆಗೆ ಏನೇ ಮುಂದೆ ಮಾಡಿದ್ರೂ ಸಹ 2023-28 ರ ನಂತರವೇ ರಾಜ್ಯ, ರಾಷ್ಟ್ರದ ನಮ್ಮ ಪಕ್ಷದ ಹಿರಿಯರು ನಮ್ಮ ಪರಿವಾರದ ನಾಯಕರು ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಾನು ಮಾಡಲಿಕ್ಕೆ ತಯಾರು ಇದ್ದೇನೆ. ಹಿಂದೆ ನನಗೆ ಯಾವುದೇ ಮಂತ್ರಿ ಇರಲಿಲ್ಲ. ಅಸಮಾಧಾನ ವ್ಯಕ್ತಪಡಿಸದೆ ಕೆಲಸ ಮಾಡಿದೆ. ನಂತರ ಭೂ ವಿಜ್ಞಾನ ಇಲಾಖೆ ಕೊಟ್ರು ಆಗಲು ಚೆನ್ನಾಗಿ ಕೆಲಸ ಮಾಡಿದೆ. ನನ್ನ ಕೆಲಸ ಗುರುತಿಸಿ ಮತ್ತೆ ಕೈಗಾರಿಕೆ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷ ಏನೇ ಜವಾಬ್ದಾರಿ ಕೊಟ್ರು, ಕೊಡದೇ ಇದ್ರು ಪಕ್ಷದ ಪರವಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ನಿರಾಣಿ ಆದಷ್ಟು ಬೇಗ ಸಿಎಂ ಆಗ್ತಾರೆ ಅಂತಾ ಈಶ್ವರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ನೀವು ಅವರನ್ನೇ ಕೇಳಬೇಕು. ಹಿಂದೆ ನಮ್ಮ ಹಿರಿಯ ನಾಯಕ ವಿಶ್ವನಾಥ ಕೂಡಾ ಇದೇ ರೀತಿ ಹೇಳಿದ್ದಾರೆ.ಅದು ಅವರ ವೈಯಕ್ತಿಕ ಅಭಿಪ್ರಾಯ ಅದನ್ನ ಗೌರವಿಸುತ್ತೇನೆ. ನಾನು ಖಚಿತಪಡಿಸುವುದು ಏನೆಂದ್ರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು
ನನ್ನ ಅಣ್ಣನಂತಿದ್ದಾರೆ, ಒಂದೇ ಕಾಲೇಜಿನಲ್ಲಿ ಕಲಿತಿದ್ದೀವಿ. ಎಲ್ಲ ರೀತಿಯ ಸಹಕಾರ ಮಾಡುತ್ತಿದ್ದಾರೆ. ಜೊತೆಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣ ಸಹಕಾರ ಅವರಿಗಿದೆ ಎಂದರು.
ಇನ್ನು ಕಳೆದ ಸಿಎಂ ಆಯ್ಕೆ ವೇಳೆ ನಿರಾಣಿ ಹೆಸರು ಮುಂಚೂಣಿಯಲ್ಲಿತ್ತು, ಹಾಗಾಗಿ ಈಶ್ವರಪ್ಪ ಹೇಳಿಕೆ ಮಹತ್ವ ಪಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಅವರಿಗಿಂತ ಹೆಚ್ಚು ಸಂತೋಷ ನಾನು ಪಟ್ಟಿದ್ದೇನೆ. ನನ್ನ ಮುಖದ ಮೇಲೆ ಯಾವುದೇ ಬದಲಾವಣೆ ಆಗಿರಲಿಲ್ಲ. ಈಗಲೂ ಸಹ ಏನೂ ಆಗುವುದಿಲ್ಲ.ನಮ್ಮದು ಹೈಕಮಾಂಡ್ ಪಕ್ಷ, ನಮ್ಮ ಪಕ್ಷ ಏನೂ ಕೆಲಸ ಕೊಡುತ್ತೊ ಅದನ್ನ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮುಂದಿನ ಅವಧಿಯಲ್ಲಿ ನಿರಾಣಿ ಅವರನ್ನ ರಾಜ್ಯದ ಜನ ಸಿಎಂ ಆಗಿ ನೋಡಬಹುದಾ ಎಂಬ ಪ್ರಶ್ನೆಗೆ ಅದೆಲ್ಲ ಕನಸು, ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಸಿದ್ರು ಅಂದಾಂಗೆ ಆಗುತ್ತೆ. ನಮ್ಮದು ಅಳೆದು ತೂಗಿ ನಮ್ಮ ದೊಡ್ಡವರು ಮಾಡುತ್ತಾರೆ. 2023ರ ವರೆಗೆ ನಿಶ್ಚಿತವಾಗಿ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ ಬಿಜೆಪಿಗೆ ಬರ್ತಾರಾ ಎಂಬ ಪ್ರಶ್ನೆಗೆ ಅವರು ಹಿರಿಯರಿದ್ದಾರೆ, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಶಕ್ತರಿದಾರೆ. ಹಿರಿಯರಾಗಿ 24 ವರ್ಷ ಕೆಲಸ ಮಾಡಿದವರಿಗೆ ಟಿಕೆಟ್ ಸಿಗಬೇಕಿತ್ತು. ನಮ್ಮ ಜಿಲ್ಲೆ, ಕೃಷ್ಣಾ ನದಿ ಹೋರಾಟ ಇನ್ನೂ ಚುರುಕುಗೊಳಿಸಬಹುದಿತ್ತು. ಟಿಕೆಟ್ ಸಿಗದೆ ಇರೋದು ನಮ್ಮ ಜಿಲ್ಲೆಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯ ಆಗಿದೆ. ಅವರ ಪಕ್ಷ, ಅವರ ನಿರ್ಧಾರ ಅವರಿಗೆ ಸಿಗಬೇಕಿತ್ತು. ವಿಪಕ್ಷದಲ್ಲಿದ್ದು ನಮಗೆ ಒಳ್ಳೆಯ ಪ್ರಶ್ನೆ ಕೇಳ್ತಿದ್ರು, ಒಳ್ಳೆಯ ಪ್ರಶ್ನೆಗಳನ್ನು ಎತ್ತಿದ್ರು. ಈ ಭಾಗ ಅಭಿವೃದ್ಧಿ ಆಗಲಿಕ್ಕೆ ಒಬ್ಬ ಸಶಕ್ತ ನಾಯಕರಾಗಿದ್ರು. ಟಿಕೆಟ್ ಕೊಡಬೇಕಿತ್ತು, ಯಾವ ಉದ್ದೇಶಕ್ಕೆ ಕೊಟ್ಟಿಲ್ಲ, ಮುಂದೆ ಏನು ಮಾಡ್ತಾರೆ ಅನ್ನೋದು ಆಪಕ್ಷಕ್ಕೆ ಬಿಟ್ಟು ಕೊಟ್ಟಿದ್ದು ಎಂದು ತಿಳಿಸಿದರು.




