ಮೇಕೆದಾಟು ಪಾದಯಾತ್ರೆ ರಾಜಕಾರಣಕ್ಕೆ ಸೀಮಿತ : ಸಿ ಟಿ ರವಿ

ಚಿಕ್ಕಮಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ರಾಜಕಾರಣಕ್ಕೆ ಸೀಮಿತವಾಗಿದೆ ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ ಟಿ ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಕೆದಾಟು ವಿಚಾರದಲ್ಲಿ ನಾವು ಕೇಳಿರುವ ಪ್ರಶ್ನೆಗಳಿಗೆ ಕಾಂಗ್ರೆಸ್ ಇದುವರೆಗೂ ಉತ್ತರವೇ ಕೊಟ್ಟಿಲ್ಲ. ಇಂತಹ ಪಾದಯಾತ್ರೆ ನಾಟಕವಾಡುವ ಬದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಕಾಂಗ್ರೆಸ್ನ ಚಿದಂಬರಂ ಮತ್ತು ಡಿಎಂಕೆ ಸ್ಟಾಲಿನ್ ಅವರನ್ನು ಒಪ್ಪಿಸಿದರೇ ಮೇಕೆದಾಟು ಯೋಜನೆ ಜಾರಿ ಸುಲಭವಾಗುತ್ತದೆ ಎಂದು ಕುಟುಕಿದರು.
ತಮಿಳುನಾಡು ತನ್ನ ಆಕ್ಷೇಪಣೆ ನಿಲ್ಲಿಸಿದರೆ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ. ಹೀಗೆ ಪಾದಯಾತ್ರೆ ನಡೆಸಿದರೆ ದೈಹಿಕ ಕಸರತ್ತು ಆಗುತ್ತದೆ ಎಂದು ವ್ಯಂಗ್ಯವಾಡಿದರು. ತಮಿಳುನಾಡನ್ನು ಒಪ್ಪಿಸುವ ತಾಕತ್ತು ಸಿದ್ದರಾಮಯ್ಯ ಅವರಿಗಿದೆ. ಸಿದ್ದರಾಮಯ್ಯ ಗುಟುರು ಹಾಕಿದ್ರೆ ಸೋನಿಯಾಗಾಂಧಿ ಅಲರ್ಟ್ ಆಗುತ್ತಾರೆ. ಸೋನಿಯಾಗಾಂಧಿ ಮಾತಿಗೆ ಚಿದಂಬರಂ ತಲೆದೂಗುತ್ತಾರೆ. ಚಿದಂಬರಂ ಒಂದು ಮಾತು ಹೇಳಿದರೆ ಸ್ಟಾಲಿನ್ ಒಪ್ಪಿಕೊಳ್ತಾರೆ. ಇದು ಸುಲಭದ ಕೆಲಸ. ಮೊದಲು ಈ ಕೆಲಸ ಮಾಡಲು ಮುಂದಾಗಲಿ ಎಂದು ಹರಿಹಾಯ್ದರು.




