MSK ಮಿಲ್ ಕಾರ್ಮಿಕರ ಗೋಳು ಕೇಳೋರ್ಯಾರು?: ಜವಳಿ ಖಾತೆ ಸಚಿವರೆ ಇತ್ತ ಗಮನ ಹರಿಸಿ

ವರದಿ: ವೀರೇಶ ಚಿನಗುಡಿ
ಕಲಬುರಗಿ: ಎಂಎಸ್‌ಕೆ ಮಿಲ್, ಒಂದು ಕಾಲದಲ್ಲಿ ಭರ್ಜರಿಯಾಗಿದ್ದ ದೊಡ್ಡದಾದ ಜವಳಿ ಮಿಲ್. ಒಂದು ಶತಮಾನಕ್ಕೂ ಅಧಿಕ ಕಾಲ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದ ಎಂಎಸ್‌ಕೆ ಮಿಲ್, ಕಾಲಕ್ರಮೇಣ ಆಧುನಿಕ ಬರಾಟೆ ಹಾಗೂ ನಷ್ಟದ ಸುಳಿಗೆ ಸಿಲುಕಿ ಮುಚ್ಚಿದೆ. ಕಾರ್ಖಾನೆ ಮುಚ್ಚಿ ಬರೋಬ್ಬರಿ 20 ವರ್ಷಗಳು ಕಳೆದರೂ ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗೋಳು ಇನ್ನೂ ತಿರುತ್ತಿಲ್ಲ, ತಮ್ಮ ಹಕ್ಕು ಪಡೆಯಲು ಇಂದಿಗೂ ಕಾರ್ಮಿಕರು ಹೋರಾಟ ಮಾಡುತ್ತಲೆ ಇದ್ದಾರೆ.
ಕಲಬುರಗಿಯ ಎಂಎಸ್‌ಕೆ ಮಿಲ್ (ಮಹೇಬೂಬ್ ಶಾಹಿ ಕುಲಬುರ್ಗಾ ಮಿಲ್ಸ್ ಕಲಬುರಗಿ) ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆ 1884 ರಲ್ಲಿ ಆರಂಭಗೊಂಡು 2002 ರಲ್ಲಿ ಮುಚ್ಚಲ್ಪಟ್ಟಿದೆ. ಈ ಕಾರ್ಖಾನೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೆಲ ಕಾರ್ಮಿಕರಿಗೆ ವಾಸಕ್ಕಾಗಿ ಕ್ವಾಟ್ರಸ್ ಗಳನ್ನ ನೀಡಲಾಗಿತ್ತು. ಕಾರ್ಖಾನೆ ಲಾಕ್ ಔಟ್ ಆದಮೇಲೆ ಕಾರ್ಮಿಕರಿಗೆ ಸೀಗಬೇಕಾದ ಹಣವನ್ನು ಕಾರ್ಖಾನೆ ನೀಡಿದೆ. ಅದರ ಜೊತೆಗೆ ಕ್ವಾಟ್ರಸ್ ಗಳಲ್ಲಿ ವಾಸವಿದ್ದ ಕಾರ್ಮಿಕರಿಗೆ ಆ ಮನೆಗಳನ್ನು ಅವರಿಗೆ ಕೊಡೊದಾಗಿ ಪ್ರತಿಯೊಬ್ಬರಿಂದ 75 ಸಾವಿರ ಹಣವನ್ನು ಕಾರ್ಖಾನೆ ಡಿಪಾಸಿಟ್ ಇಟ್ಟುಕೊಂಡಿದೆ.
ಕಾರ್ಖಾನೆ ಬಂದ್ ಆಗಿ ಬರೋಬ್ಬರಿ 20 ವರ್ಷಗಳು ಕಳೆದ್ರು ಈವರೆಗೂ ಕ್ವಾಟ್ರಸ್ ನಲ್ಲಿ ವಾಸಿಸುತ್ತಿರುವ 130 ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರ ಸಿಕ್ಕಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ಬೆಂಗಳೂರು, ದೆಹಲಿಯ ನ್ಯಾಷನಲ್ ಟೆಕ್ಸಟೈಲ್ ಕಾರ್ಪೋರೇಷನ್ ಕಚೇರಿ ಅಲೆದಾಡಿದರು ಬರಿ ಭರವಸೆಗಳು ಬಿಟ್ರೆ ಯಾವುದೇ ಪ್ರಯೋಜನ ಆಗಿಲ್ಲ ಅನ್ನೋದು ಮಾಜಿ ಕಾರ್ಮಿಕರ ಅಳಲು. 2011 ರಲ್ಲಿ ಬೆಂಗಳೂರಿನಲ್ಲಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಜವಳಿ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಮನೆಗಳ ಹಕ್ಕುಪತ್ರ ಕೊಡೊದಾಗಿ ಭರವಸೆ ಕೊಟ್ಟಿದ್ದಾರೆ. ಭರವಸೆ ನೀಡಿ ಹತ್ತು ವರ್ಷಗಳು ಉರುಳಿದ್ರು ಇನ್ನೂ ಕಾರ್ಮಿಕರಿಗೆ ಹಕ್ಕು ಪತ್ರ ಸಿಕ್ಕಿಲ್ಲ.
ಎಂಎಸ್‌ಕೆ ಮಿಲ್ ಮಾಜಿ ಕಾರ್ಮಿಕರು ಆಗಿರುವ ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೂ ಕುಡಾ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಮನೆ ಹಕ್ಕು ಪತ್ರ ಒಂದೆಡೆಯಾದ್ರೆ, 120 ವರ್ಷಗಳ ಹಳೆಯದಾದ ಕ್ವಾಟ್ರಸ್ ಗಳು ಈಗ ಶೀಥಿಲಾವಸ್ಥೆ ತಲುಪಿವೆ. ಗೊಡೆ, ಛಾವಣಿ ಬಿರುಕು ಬಿಟ್ಟಿದ್ದು, ಮನೆಗಳು ಸೋರುತ್ತಿವೆ. ಹೀಗಾಗಿ ಕಾರ್ಮಿಕರ ಕುಟುಂಬಗಳು ಜೀವ ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇತ್ತ ಹಕ್ಕು ಪತ್ರಗಳು ಸಿಗದ ಕಾರಣ ಮನೆಗಳನ್ನು ದುರಸ್ಥೆ ಕೂಡಾ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಒಟ್ಟಿನಲ್ಲಿ ಕಾರ್ಖಾನೆ ಮುಚ್ಚಿ ಕಾರ್ಮಿಕ ಬದುಕು ಬಿದಿಗೆ ಬಿದ್ದಿದೆ. ಇತ್ತ ಸೂರಿನ ಆಸೆಯಲ್ಲಿರುವ ಕಾರ್ಮಿಕರಿಗೆ ಹಕ್ಕು ಪತ್ರ ಕೊಡಲು ವಿಳಂಬ ಆಗುತ್ತಲೆ ಇದೆ. ಕೇಂದ್ರ ಜವಳಿ ಸಚಿವರು ಮನಸ್ಸು ಮಾಡಿದರೆ ಇದೇನು ದೊಡ್ಡದೇನಲ್ಲ. ಸಚಿವರು ಸಮಸ್ಯೆಗೆ ಸ್ಪಂದಿಸಬೇಕು, ಆ ಮೂಲಕ ತೊಂದರೆಯನ್ನು ನಿವಾರಿಸುವತ್ತ ಗಮನ ಹರಿಸಬೇಕಿದೆ.




