ಮಂಡ್ಯ
ಕಾರಿನ ಗಾಜು ಒಡೆದು 7 ಲಕ್ಷ ದರೋಡೆ

ಮಂಡ್ಯ : ಸಿನಿಮೀಯ ರೀತಿಯಲ್ಲಿ ಕಾರಿನ ಗಾಜು ಒಡೆದು ಬ್ಯಾಂಕಿನಿಂದ ಡ್ರಾ ಮಾಡಿದ್ದ 7 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಶಿಕ್ಷಕ ನಾಗರಾಜು ಅವರನ್ನ ಹಿಂಬಾಲಿಸಿದ ದುಷ್ಕರ್ಮಿಗಳು ಸಿನಿಮೀಯ ರೀತೀಯಲ್ಲಿ ಹಣವನ್ನ ಎಗರಿಸಿ ಪರಾರಿಯಾಗಿದ್ದಾರೆ.
ಸುಮಾರು 7 ಲಕ್ಷ ಹಣವನ್ನ ಕೆನರಾ ಬ್ಯಾಂಕ್ ನಿಂದ ಡ್ರಾ ಮಾಡಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ನಾಗರಾಜು ಮನೆ ಮುಂದೆ ಕಾರ್ ನಿಲ್ಲಿಸಿ ಮನೆಯ ಬಾಗಿಲು ತೆಗೆದು ಬರುವಷ್ಟರಲ್ಲಿ ನಿಲ್ಲಿಸಿದ್ದ ಕಾರ್ ಗಾಜು ಒಡೆದು ಹಣ ಎಗರಿಸಿ ಪರಾರಿಯಾಗಿದ್ದಾರೆ. ಪಟ್ಟಣದ ಸಿಸಿಟಿವಿಗಳ ಪರಿಶೀಲನೆ ನಡೆಸಿದ ಪೋಲಿಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




