ಸವದತ್ತಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ

ಬೆಳಗಾವಿ: ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸವದತ್ತಿ ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ನಡೆದಿದೆ.
ಪಂಚಪ್ಪಾ ಕಣವಿ (25), ಸಕ್ಕೂಬಾಯಿ ಕರಿಗಾರ (23) ಮೃತ ದುರ್ದೈವಿಗಳಾಗಿದ್ದಾರೆ. ಪಂಚಪ್ಪ ಹಾಗೂ ಸಕ್ಕೂಬಾಯಿ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಉಭಯ ಕುಟುಂಬಸ್ಥರು ಅವಕಾಶ ನೀಡದ ಕಾರಣ ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೆ ಯುವತಿ ಜೊತೆಗೆ ವಿವಾಹವಾಗಿದ್ದ. ವಿವಾಹದ ನಂತರೂ ಸಕ್ಕೂಬಾಯಿ, ಪಂಚಪ್ಪಾ ಪ್ರೇಮ ಮುಂದುವರಿದಿತ್ತು.
ಕಳೆದ ಒಂದು ತಿಂಗಳು ಹಿಂದೆ ಸಕ್ಕೂಬಾಯಿಗೆ ಬೇರೆ ಹುಡುಗನ ಜೊತೆಗೆ ವಿವಾಹ ಆಗಿತ್ತು. ತಿಂಗಳು ಕಳೆದರೂ ಸಕ್ಕೂಬಾಯಿ ಗಂಡನ ಮನೆಗೆ ಹೋಗಿಲ್ಲ. ಪಂಚಪ್ಪ ಹಾಗೂ ಸಕ್ಕೂಬಾಯಿ ಮದುವೆ ನಂತರವೂ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರಂತೆ. ಗಂಡನ ಮನೆಗೆ ಹೋದರೆ ನಾವಿಬ್ಬರೂ ಬೇರೆ ಬೇರೆ ಆಗುತ್ತೇವೆ ಎಂದು ಪ್ರೇಮಿಗಳು ಮನನೊಂದು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ಸುದ್ದಿ ತಿಳಿದಾಕ್ಷಣವೇ ಎರಡೂ ಕುಟುಂಬಗಳ ಸದಸ್ಯರು ಸ್ಥಳಕ್ಕೆ ದೌಡಾಯಿಸಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




