ಮೀನುಗಾರರಿಗೆ ಧೈರ್ಯ ತಂಬಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕಾರವಾರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೀನುಗಾರರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅವರು ಮೀನುಗಾರರಿಗೆ ನ್ಯಾಯ ಒದಗಿಸುವ ಕುರಿತು ಭರವಸೆ ನೀಡಿದರು.
ಪೊಲೀಸ್ ಬರಲಿ, ಯಾರೇ ಬರಲಿ ಯಾವುದೇ ಕಾರಣಕ್ಕೂ ಮೀನುಗಾರರು ಹೆದರಬೇಡಿ, ನೀವಿರುವ ಜಾಗವನ್ನೂ ಬಿಡಬೇಡಿ. ಇದಕ್ಕೆ ಯಾವ ರೀತಿಯ ರೂಪ ನೀಡಬೇಕು ಎಂಬುದನ್ನು ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಮೀನುಗಾರರಿಗೆ ಧೈರ್ಯ ತುಂಬಿದರು.
ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬುಧವಾರ ಉಡುಪಿಯಿಂದ ಹೊನ್ನಾವರದ ಕಾಸರಕೋಡ ಟೊಂಕಾ ಭಾಗಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆಯ ಕುರಿತು ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಕರಾವಳಿ ಪ್ರದೇಶದ ಮೀನುಗಾರರನ್ನು ಭೇಟಿ ಮಾಡಲು ಬಂದಿದ್ದೇನೆ. ಅನೇಕರು ನನ್ನಲ್ಲಿ ಬಂದು ಅವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.ಹೀಗಾಗಿ ಕರಾವಳಿ ಭಾಗದ ಮೀನುಗಾರರಿಗೆ ನನ್ನಿಂದಾದ ಸಹಾಯ, ಸಹಕಾರವನ್ನು ಮಾಡಬೇಕೆನ್ನುವ ಉದ್ದೇಶದಿಂದ ಬಂದಿದ್ದೇನೆ. ಇಲ್ಲಿ ಯಾವುದೇ ರಾಜಕೀಯ ಪಕ್ಷದ ಸಭೆ, ರಾಜಕಾರಣ ಮಾಡದೆ ನೇರವಾಗಿ ಬಂದು ಮೀನುಗಾರರಿಗೆ ಆಗಿರುವ ಸಮಸ್ಯೆ ಬಗ್ಗೆ ಅರಿತು ಮುಂದಿನ ದಿನದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮೀನುಗಾರರ ಬಗ್ಗೆ ಬಹಳಷ್ಟು ವಿಷಯಗಳನ್ನು ಚರ್ಚೆ ಮಾಡಿದ್ದೇನೆ.

ಬಂದರು ನಿರ್ಮಾಣದ ಬಗ್ಗೆ ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಕಾನೂನಾತ್ಮಕವಾಗಿಯೋ, ರಾಜಕೀಯವಾಗಿಯೋ ಅಥವಾ ಧರಣಿ ಮಾಡಬೇಕೆ ಎನ್ನುವುದನ್ನು ಯೋಚನೆ ಮಾಡಿ ನಾನು, ಮಾಜಿ ಸಿ.ಎಂ. ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ದೇಶಪಾಂಡೆ ಅವರು ಆದಿಯಾಗಿ ಬಂದು ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ತೀರ್ಮಾನಿಸಿ ಮುಂದಿನ ದಿನಗಳಲ್ಲಿ ನಿಮಗೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮೀನುಗಾರರಿಗೆ ಆತ್ಮಸ್ಥೈರ್ಯ ತುಂಬಿದರು.
ಅಭಿವೃದ್ಧಿಗೊಳಿಸಲು ಟೊಂಕಾ ಬಂದರು ಪ್ರದೇಶವನ್ನು ಖಾಸಗಿಯವರಿಗೆ ಕೊಟ್ಟಿದ್ದಾರೆ ಎನ್ನುವ ವಿಚಾರ ನನ್ನ ಗಮನಕ್ಕೆ ಬಂದಿದೆ.ಖಾಸಗೀಕರಣ ಮಾಡಲು ಇಲ್ಲಿಯ ಜಾಗವನ್ನೇ ಕೊಡಬೇಕು ಎಂದಿಲ್ಲ. ಖಾಸಗಿಯವರಿಗೆ ಎಲ್ಲಿ ಬೇಕಾದರೂ ಕೊಡಬಹುದು.ಸರ್ಕಾರ ಅಭಿವೃದ್ಧಿ ಮಾಡಲಿ, ಬೇಡ ಎನ್ನುವುದಿಲ್ಲ.ಆದರೆ ನೂರಾರು ವರ್ಷಗಳಿಂದ ಪಾರಂಪರಿಕವಾಗಿ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುವವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂಬ ವಿಚಾರವನ್ನು ಮಾಜಿ ಶಾಸಕರು ನನ್ನ ಗಮನಕ್ಕೆ ತಂದಿದ್ದರು. ಹೀಗಾಗಿ ಆ ಪ್ರದೇಶಕ್ಕೆ ನಾನು ಭೇಟಿ ಮಾಡಲೇಬೇಕು ಎಂಬ ಕಾರಣಕ್ಕಾಗಿ ಇಲ್ಲಿಗೆ ಬಂದು ಇಲ್ಲಿಯ ಪರಿಸ್ಥಿತಿಯನ್ನು ನಾನು ನನ್ನ ಕಣ್ಣಾರೆ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಲೀಡರ್ಗಳನ್ನು ಕರೆಯಿಸಿ ಪ್ರತ್ಯೇಕವಾಗಿ ಮಾತನಾಡುತ್ತೇನೆ. ವಿಧಾನಸಭಾ ಅಧಿವೇಶನದಲ್ಲಿ ಏನೇನು ಸಹಾಯ ಆಗಬೇಕು ಅದನ್ನು ನಾನು ಮಾಡುತ್ತೇನೆ ಎಂದು ಮೀನುಗಾರರಿಗೆ ಧೈರ್ಯ ತುಂಬಿದರು.
ಮೀನುಗಾರ ಕುಟುಂಬಕ್ಕೆ ನೆರವು
ಇತ್ತೀಚೆಗೆ ನಾಡದೋಣಿ ದುರಂತದಲ್ಲಿ ಮೃತಪಟ್ಟ ಉದಯ ದಾಮೋದರ ತಾಂಡೇಲ್ ಅವರ ಕುಟುಂಬಕ್ಕೆ ಶಿವಕುಮಾರ್ ಅವರು ಆರ್ಥಿಕ ಧನಸಹಾಯ ನೀಡಿ,ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು




