ಕೊಡಗು

ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ತಡೆ ಹಾಕಲು ಒತ್ತಾಯ: ಜಿಲ್ಲಾಡಳಿತಕ್ಕೆ 15 ದಿನಗಳ ಗಡುವು

ಕೊಡಗು: ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡದಿರುವಂತೆ ಪ್ರವಾಸೋದ್ಯಮ ವಿರೋಧಿ ಒಕ್ಕೂಟ ಒತ್ತಾಯಿಸಿದೆ.

ಪ್ರವಾಸೋದ್ಯಮದಿಂದ ಕೊಡಗನ್ನು ರಕ್ಷಿಸಿ ಎಂಬ ವಾಕ್ಯದೊಂದಿಗೆ ‘ಸೇವ್ ಕೊಡಗು ಫ್ರಮ್ ಟೂರಿಸಂ’ ಎಂಬ ಪ್ರವಾಸೋದ್ಯಮ ವಿರೋಧಿ ಒಕ್ಕೂಟದಿಂದ ಪೊನ್ನಂಪೇಟೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ.

ಸಭೆಯಲ್ಲಿ ಸ್ಥಳೀಯ ಮೂಲ ನಿವಾಸಿಗಳು ಹಾಗೂ ಅನಾದಿ ಕಾಲದಿಂದಲೂ ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ, ಕೊಡಗಿನ ಮೇಲೆ ಅಭಿಮಾನವಿರುವ ಸಮಾನ ಮನಸ್ಸಿನ ವಿವಿಧ ಜನಾಂಗದ ಪ್ರತಿನಿಧಿಗಳು ಭಾಗಿಯಾಗಿದ್ದರು. ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಿ, ಸ್ಥಳೀಯ ಅಂಗಡಿ ಮುಂಗಟ್ಟುಗಳು ಮತ್ತು ಶಾಲಾ ಕಾಲೇಜುಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವಿಕೆಂಡ್ ಕರ್ಫ್ಯೂ ಹೆಸರಿನಲ್ಲಿ ಕೇವಲ ಸ್ಥಳೀಯರನ್ನು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಮನೆಯೊಳಗೆ ಕೂಡಿ ಹಾಕುವುದಲ್ಲ, ಪ್ರವಾಸೋದ್ಯಮ ಚಟುವಟಿಕೆಗಳನ್ನು, ಹೋಂಸ್ಟೇ ರೆಸಾರ್ಟ್ ಗಳನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ಆಗ್ರಹಿಸಿದರು.

ಕೊಡಗಿನಲ್ಲಿ ಶೇಕಡಾ 1 ರಷ್ಟಿರುವ ಪ್ರವಾಸೋದ್ಯಮ ಅವಲಂಬಿತರಿಂದ ಶೇಕಡಾ 99ರಷ್ಟಿರುವ ಕೃಷಿ ಅವಲಂಬಿತರ ಬದುಕು ಅತಂತ್ರವಾಗಿದೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯೇ ಹೊರತು, ಪ್ರವಾಸೋದ್ಯಮ ಅವಲಂಬಿತ ಜಿಲ್ಲೆಯಲ್ಲ. ಕೊಡಗಿನಲ್ಲಿ ಶೇಕಡಾ 99ರಷ್ಟು ಕೃಷಿಕರು ಹಾಗೂ ಕೃಷಿ ಅವಲಂಬಿತ ವ್ಯಾಪಾರಸ್ಥರೇ ಹೆಚ್ಚಾಗಿದ್ದಾರೆ. ಶೇಕಡಾ 1ರಷ್ಟಿರುವ ಪ್ರವಾಸೋದ್ಯಮ ಅವಲಂಬಿತರಿಗಾಗಿ ಕೊಡಗನ್ನು ಬಲಿಕೊಡದಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಹಣಕ್ಕಾಗಿ ಸಂಸ್ಕೃತಿಯ ಮಾರಾಟ:

ಕೊಡಗಿನ ಶ್ರೀಮಂತ ಸಂಸ್ಕೃತಿಯನ್ನು ಪ್ರವಾಸೋದ್ಯಮದ ನೆಪದಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಉಡುಗೆ-ತೊಡುಗೆಯನ್ನು ದುಡ್ಡಿಗೋಸ್ಕರ ಮಾರಾಟ ಮಾಡಲಾಗುತ್ತಿದೆ ಎಂಬ ಆಕ್ರೋಶ ಸಭೆಯಲ್ಲಿ ವ್ಯಕ್ತವಾಯಿತು.

ಊರೂರಿನಲ್ಲಿ ಜನರು ಸಂಘಟಿತರಾಗಿ, ಈ ಸುಂದರ ಕೊಡಗನ್ನು ಮುಂದಿನ ಪೀಳಿಗೆಗೂ ಕೊಡಗಾಗಿಯೇ ಉಳಿಸಿ ಬೆಳೆಸಲು ಮನವಿ ಮಾಡಲಾಯಿತಲ್ಲದೆ, ಜಿಲ್ಲೆಯ ವಿವಿಧ ಗಡಿಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ಕೊವೀಡ್ ನಿಯಮವನ್ನು ಪಾಲಿಸದೆ ಹಾಗೂ ಯಾವುದೇ ದಾಖಲೆಗಳಿಲ್ಲದೆ ಕೊಡಗಿಗೆ ಬರುತ್ತಿರುವ ಅಸ್ಸಾಮಿ ಕಾರ್ಮಿಕರು ಎಂದು ಹೇಳಲಾಗುವ ಹೊರ ರಾಜ್ಯದಿಂದ ಬರುತ್ತಿರುವ ವಲಸಿತ ಕಾರ್ಮಿಕರ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತು.

ವರದಿ ಬಗ್ಗೆ ಅನುಮಾನ:
ಇದೀಗ ಜಿಲ್ಲಾಡಳಿತ ಬಿಡುಗಡೆ ಮಾಡುತ್ತಿರುವ ಕೋವಿಡ್ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಭೆ, ಒಂದೆರಡು ತಿಂಗಳು ಹೊರಗಿನ ಪ್ರವಾಸಿಗರಿಗೆ ಕೊಡಗಿನ ಪ್ರವಾಸಿ ತಾಣಗಳ ಬಾಗಿಲನ್ನು ಮುಚ್ಚಲು ಮತ್ತು ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಯನ್ನು ಹೆಚ್ಚಿಸಲು ಒತ್ತಾಯಿಸಲಾಯಿತು.

ಪಟ್ಟಿಯಿಂದ ಕೈಬಿಡಿ: ಕೊಡಗಿನ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಟ್ಟು, ಜಿಲ್ಲೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ತರಲು ಆಗ್ರಹಿಸಲಾಯಿತು.

15 ದಿನಗಳ ಗಡುವು: ಈ ಎಲ್ಲಾ ಬೇಡಿಕೆಗಳನ್ನು ಮುಂದಿನ 15 ದಿನಗಳ ಒಳಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಸರಿಪಡಿಸಬೇಕು. ಇಲ್ಲವಾದಲ್ಲಿ ಸೆಪ್ಟೆಂಬರ್ 16ರಂದು ನಡೆಯುವ ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಜಾತಿ ಜನಾಂಗವನ್ನು ಹಾಗೂ ಕೃಷಿಕರನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವಂತೆಯೂ ಸಭೆ ತಿರ್ಮಾನಿಸಿತು.

ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ವಿರೋಧಿಸುವ ನಿಟ್ಟಿನಲ್ಲಿ ಕರೆದಿದ್ದ ಸಭೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸಿದ್ದಾಪುರ, ಮರಗೋಡು, ವೀರಾಜಪೇಟೆ, ಬಾಳೆಲೆ, ಬಿ.ಶೆಟ್ಟಿಗೇರಿ, ಕುಂದಾ, ಪೊನ್ನಂಪೇಟೆ, ಗೋಣಿಕೊಪ್ಪ, ಬಾಡಗರಕೇರಿ, ಕಾನೂರು, ಕುಟ್ಟಾ, ಹುದಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಮೂಲ ನಿವಾಸಿ ಯರವ ಜನಾಂಗದ ಪ್ರತಿನಿಧಿಗಳೂ ಸೇರಿದಂತೆ ಸ್ಥಳೀಯ ಮೂಲ ನಿವಾಸಿಗಳು ಹಾಗೂ ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ನೆಲೆಕಂಡುಕೊಂಡ ವಿವಿಧ ಜಾತಿ ಜನಾಂಗ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಮಾತ್ರ ವಿಶೇಷವಾಗಿತ್ತು

Spread the love

Related Articles

Leave a Reply

Your email address will not be published. Required fields are marked *

Back to top button