ನವೆಂಬರ್ 20ಕ್ಕೆ ಕೊಡಗಿನ ಸುಗ್ಗಿ ಹುತ್ತರಿ ಆಚರಣೆ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಖ್ಯಾತ ಸುಗ್ಗಿ ಹಬ್ಬ ಹುತ್ತರಿಗೆ ದಿನಾಂಕ ನಿಗಧಿಯಾಗಿದೆ. ನ.20 ರಂದು ಜಿಲ್ಲೆಯಾದ್ಯಂತ ಹುತ್ತರಿ ಹಬ್ಬ ಆಚರಣೆ ಮಾಡಲಾಗುವುದು.
ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹುತ್ತರಿ ಹಬ್ಬವು ವ್ಯವಸಾಯಕ್ಕೆ ಸಂಬಂಧಿಸಿದ ಆಚರಣೆಯಾಗಿದ್ದು, ವರ್ಷದ ಮೊದಲ ಬೆಳೆ ತೆಗೆಯುವ ಸಂದರ್ಭದಲ್ಲಿ ಆಚರಿಸುವ ಈ ಹಬ್ಬವನ್ನು ‘ಸುಗ್ಗಿ ಹಬ್ಬ’ ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಹುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ವ್ಯವಸಾಯ ಪ್ರಧಾನವಾದ ನಾಡು ಕೊಡಗು. ಇಲ್ಲಿ ವ್ಯವಸಾಯವನ್ನು ಅವಲಂಬಿಸಿರುವ ಎಲ್ಲರೂ ಈ ಹಬ್ಬವನ್ನು ಆಚರಿಸಿದರೂ ಕೊಡಗಿನಲ್ಲಿ ಕೊಡವರು ಆಚರಿಸುವ ಈ ಹುತ್ತರಿ ಹಬ್ಬದ ಆಚರಣೆ ವಿಶಿಷ್ಟವಾದುದು.
ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಹುತ್ತರಿ ಆಚರಣೆ ಮಾಡಲಾಗುತ್ತದೆ. ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಶನಿವಾರ (20) ರಾತ್ರಿ 7:35 ಕ್ಕೆ ನೆರೆ ಕಟ್ಟುವುದು, ರಾತ್ರಿ 8 ಗಂಟೆ 35 ನಿಮಿಷಕ್ಕೆ ಕದಿರು ತೆಗೆಯುವುದು, 9 ಗಂಟೆ 35 ನಿಮಿಷಕ್ಕೆ ಭೋಜನಕ್ಕೆ ಸಮಯ ನಿಗಧಿ ಮಾಡಲಾಗಿದೆ.
ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಜ್ಯೋತಿಷ್ಯರಾದ ಶಶಿಕುಮಾರ್ ಕೆ ಅವರಿಂದ ಮುಹೂರ್ತ ನಿಗಧಿಗೊಳಿಸಲಾಗಿದೆ.




