ಕೊಡಗು

ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ; ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳಲು ತಯಾರಿ

ಮಡಿಕೇರಿ: ಕೊಡಗಿನಲ್ಲಿ ಇಂದು ಹುತ್ತರಿ ಸಂಭ್ರಮ. ಕೈಲು ಮುಹೂರ್ತ ಮತ್ತು ಹುತ್ತರಿ ಕೊಡಗಿನ ಪ್ರಮುಖ ಹಬ್ಬಗಳು. ಕೊಡಗಿನ ಕೃಷಿಕ ಗೌಡರು ಮತ್ತು ಕೊಡವರು ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ‌ ಆಚರಿಸುತ್ತಾರೆ. ಶನಿವಾರದ ರಾತ್ರಿ ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆ ನಡೆಯಲಿದ್ದು, ಧಾನ್ಯಲಕ್ಷ್ಮಿಯನ್ನು ಶ್ರದ್ಧಾ ಭಕ್ತಿ ಯಿಂದ ಮನೆ ತುಂಬಿಸಿ ಕೊಳ್ಳುವ ಅದ್ಭುತ ಉತ್ಸವ ಇದಾಗಿದೆ.

ಹುತ್ತರಿ ಹಬ್ಬದಂದು ಸಾಂಕೇತಿಕವಾಗಿ ಬೆಳೆದ ಬೆಳೆಯ ಮೊದಲ ಧಾನ್ಯವನ್ನು ಕೊಡವರ ಪ್ರಮುಖ ಆರಾಧ್ಯ ದೈವಗಳಾದ ಕಾವೇರಿ ಅಮ್ಮ ಹಾಗೂ ಮಳೆ-ಬೆಳೆ ತರುವ ದೇವರು ಇಗ್ಗುತಪ್ಪನಿಗೆ ಕೃತಜ್ಞತೆಯಿಂದ ಸಮರ್ಪಿಸುತ್ತಾರೆ. ಇಗ್ಗುತಪ್ಪ ದೇವಸ್ಥಾನದ ಗದ್ದೆಯಲ್ಲಿ ಕದಿರು ಮೂರ್ತವಾದ ಮೇಲೆ ಸಾರ್ವಜನಿಕರು ತಮ್ಮ ಗದ್ದೆಯಿಂದ ಕದಿರು ತಂದು ಹಬ್ಬ ಆಚರಿಸುತ್ತಾರೆ.

ಕೊಡವ ಭಾಷೆಯಲ್ಲಿ ಪುತ್ತರಿ ಅಂದರೆ ಹೊಸ ಅಕ್ಕಿ ಎಂದರ್ಥ. ಕನ್ನಡದಲ್ಲಿ ಅದೇ ಶಬ್ಧ ಹುತ್ತರಿ ಆಗಿದೆ. ಕೃಷಿ ಪ್ರಧಾನವಾದ ನಾಡಿನಲ್ಲಿ ಭೂಮಿತಾಯಿಗೆ ಕೃತಜ್ಞತೆ ಅರ್ಪಿಸಲು ಹಲವಾರು ಆಚರಣೆಗಳು ಇದ್ದು, ತನ್ನ ವಿಶಿಷ್ಟ ಆಚಾರ, ಸಂಪ್ರದಾಯ, ಊಟ, ಉಪಚಾರ, ಉಡುಗೆ ತೊಡುಗೆಗಳಿಂದಲೂ ಇಲ್ಲಿನ ಜನರು ‌ಪ್ರಕೃತಿಯೊಂದಿಗೆ ಅವಿನಾಭಾವ ‌ಸಂಬಂಧವನ್ನು ಹೊಂದಿದ್ದಾರೆ.

ನಿಶ್ಚಿತವಾದ ಗದ್ದೆಗೆ ಕದಿರು ಕೊಯ್ಯುವವರು ಕತ್ತಿಹಿಡಿದು ಉಳಿದವರು ಕುಕ್ಕೆ, ಚಾಪೆ‌ ಹಾಗೂ‌ ಕೋವಿ ಹಿಡಿದು‌ ತೆರಳುವರು. ಓಲಗ, ಹುತ್ತರಿ ಹಾಡು ಹಾಡುತ್ತಾ, ಡೋಲುಬಾರಿಸುತ್ತಾ, ಹುತ್ತರಿ ಹಬ್ಬಕ್ಕೆ ಕೋವಿಯಿಂದ ಗುಂಡು ಹಾರಿಸುವ ಮೂಲಕ ಚಾಲನೆ ನೀಡುವರು. ಕದಿರು ‌ಹೊತ್ತು‌ಮನೆ ಪ್ರವೇಶಿಸಿಸುವಾಗ ಮನೆಯ ಹೆಂಗಸರು ಕಾಲು ತೊಳೆದು ಕುಡಿಯಲು ಹಾಲು, ಬಾಳೆಹಣ್ಣು, ಜೇನು ತುಪ್ಪ ತಿನ್ನಿಸಿ ಕದಿರನ್ನು ಆದರದಿ ಬರಮಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಕೊಡವರ ಕುಟುಂಬದ ಐನ್ ಮನೆಗಳಲ್ಲಿ ಕುಟುಂಬಸ್ಥರು ಸೇರಿ ಕದಿರು ಕಟ್ಟಿದ ನಂತರ ಕದಿರನ್ನು ಅಂಗಳದ ಮೇಟೀ ಕಂಬಕ್ಕೆ, ಮನೆಯ ಕಿಟಿಕಿ ಬಾಗಿಲಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಅಶ್ವತದೆಲೆಯಲ್ಲಿ ಸುತ್ತಿನಾರಿನಿಂದ ‌ಕಟ್ಟುತ್ತಾ “ಪುಲಿ ಪುಲಿ ದೇವಾ” ಎಂದು ಪ್ರಾರ್ಥಿಸುತ್ತಾರೆ.

ಹುತ್ತರಿಯಂದು “ನೆರೆ ಕಟ್ಟುವೋ” ಎಂಬ‌ ಕ್ರಮವಿದ್ದು ಆಲ, ಅಶ್ವತ್ಥ ಮತ್ತು ಕೇಕು ಮರದ ಎಲೆಗಳನ್ನು ‌ಸೇರಿಸಿ ಸಿದ್ಧಪಡಿಸಿಕೊಂಡು ಕದಿರು ಕಟ್ಟುವ ಗದ್ದೆಯಲ್ಲಿ ಭತ್ತದ ತೆನೆಗಳಿಗೆ ಹೂವಿನಿಂದ ಅಲಂಕರಿಸಲಾಗುತ್ತದೆ.

ಮನೆಯ ಹಿರಿಯ, ಕಿರಿಯರೆಲ್ಲಾ ಸೇರಿ ತೂಗು ದೀಪದೆದುರು ಪ್ರಾರ್ಥಿಸುತ್ತಾರೆ. ಹಾಲು ಜೇನು ಹಾಕಿ ಅಕ್ಕಿ ಹಿಟ್ಟಿನಿಂದ ಮಾಡಿದ ವಿಶೇಷ ತಿಂಡಿ ಹಾಗೂ ಎಳ್ಳು, ಶುಂಠಿ, ತೆಂಗಿನ ತುರಿ, ಬಾಳೆ ಹಣ್ಣು, ಜೇನಿನೊಂದಿಗೆ ಕಲಸಿ ಸಣ್ಣ ಸಣ್ಣ ತಂಬಿಟ್ಟುಗಳ ಉಂಡೆಗಳನ್ನಾಗಿ ಮಾಡಿ, ಹೊಸ ಚಾಪೆ ಮೇಲೆ ‌ಹಾಸಿದ ಅಶ್ವತ್ಥ ಎಲೆಗಳ ಮೇಲೆ ಇಟ್ಟು, ನಂತರ ದಿವಂಗತ ಹಿರಿಯರನ್ನು ನೆನಪಿಸಿಕೊಂಡು ಮೀಸಲು ಇಡುತ್ತಾರೆ. ಬೆಲ್ಲ, ಅಕ್ಕಿ ‌ಸೇರಿಸಿ ‌ಪಾಯಸ‌ ಮಾಡುವಾಗ ಹೊಸ ಅಕ್ಕಿ ‌ಸೇರಿಸುವುದು ಸಂಪ್ರದಾಯ.

ಹುತ್ತರಿ ಹಬ್ಬದ ದಿನ ಎಲ್ಲರೂ ಒಟ್ಟಾಗಿ ಕುಳಿತು ಬೇಯಿಸಿದ ಗೆಣಸ್ಸಿಗೆ ಜೇನು‌ಸೇರಿಸಿ ಅದ್ದಿತಿನ್ನುವ ಕ್ರಮವಿದೆ. ಹುತ್ತರಿ ಹಬ್ಬವಾದ ಮೇಲೆ ‌ಸಾಂಪ್ರದಾಯಿಕ ಉಡುಗೆ ಧರಿಸಿ, ವ್ರತ್ತಾಕಾರದಲ್ಲಿ ಕುಣಿಯುತ್ತಾ, ಹಾಡುತ್ತಾ, ವಿಶಾಲ ಮೈದಾನದಲ್ಲಿ ಕೋಲಾಟ, ಸುಗ್ಗಿ ಕುಣಿತ ಕುಣಿಯುತ್ತಾರೆ. ಮಹಿಳೆಯರು ಸಾಂಪ್ರದಾಯಿಕ ಉಮ್ಮತ್ತಾಟ್ ನಲ್ಲಿ ಭಾಗವಹಿಸುತ್ತಾರೆ.

ಊರಿನವರೆಲ್ಲಾ ಒಟ್ಟಿಗೆ ಸೇರಿ ವಿವಿಧ ಕ್ರೀಡೆ, ಸಾಂಸ್ಕೃತಿಕ ‌ಕಾರ್ಯಕ್ರಮಗಳು ನಡೆಸಿ ಖುಷಿಪಡುತ್ತಾರೆ.

Spread the love

Related Articles

Leave a Reply

Your email address will not be published. Required fields are marked *

Back to top button