ಕೊರೊನಾದಿಂದ ಮೃತಪಟ್ಟ ಮಹಿಳೆ; ಕೊಡಗು ಮಾಧ್ಯಮ ಸ್ಪಂದನ ತಂಡದಿಂದ ಅಂತ್ಯ ಸಂಸ್ಕಾರ

ಮಡಿಕೇರಿ: ಕೊಡಗಿನ ಪಾಲಿಬೆಟ್ಟದ ಮಸ್ಕಲ್ ತೋಟದ 49 ವರ್ಷ ಪ್ರಾಯದ ಹೇಮಾವತಿ ಎಂಬವರು ಭಾನುವಾರ ಬೆಳಗ್ಗೆ 9 ಗಂಟೆಗೆ ಮಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು. ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ ನೆರವೇರಿಸಲು ಮಾಧ್ಯಮ ಸ್ಪಂದನ ತಂಡದ ಪುತ್ತಂ ಪ್ರದೀಪ್ ಅವರಿಗೆ ಸಂಸಾರದವರು ವಿನಂತಿಸಿಕೊಂಡಿದ್ದರು.
ಪುತ್ತಂ ಪ್ರದೀಪ್ ಮಾಧ್ಯಮ ಸ್ಪಂದನದ ನೇತೃತ್ವ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ತಿಳಿಸಿದರು. ಅದಕ್ಕೆ ಸ್ಪಂದಿಸಿದ ಅವರು, ಮಾಧ್ಯಮ ಸ್ಪಂದನ ತಂಡದ ಪುತ್ತರಿರ ಪಪ್ಪು ತಿಮ್ಮಯ್ಯ, ಕುಟ್ಟಂಡ ಅಜಿತ್ ಕರಂಬಯ್ಯ, ಎನ್. ವಿನಯ್, ಚೆಟ್ಟಳ್ಳಿಯ ಸಾಮಾಜಿಕ ಕಾರ್ಯಕರ್ತ ಬಿ.ಪಿ. ಸುನೀಲ್ ಅವರೊಂದಿಗೆ ಪಾಲಿಬೆಟ್ಟಕ್ಕೆ ತೆರಳಿದರು.
ಅಜ್ಜಮಾಡ ರಮೇಶ್ ಕುಟ್ಟಪ್ಪ, ಪುತ್ತಂ ಪ್ರದೀಪ್, ಪುತ್ತರಿರ ಪಪ್ಪು ತಿಮ್ಮಯ್ಯ, ಕುಟ್ಟಂಡ ಅಜಿತ್ ಕರುಂಬಯ್ಯ, ಎನ್.ವಿನಯ್, ಬಿ.ಪಿ. ಸುನೀಲ್ ಪಿಪಿಇ ಕಿಟ್ ಧರಿಸಿ ಪ್ರಾರ್ಥಿವ ಶರೀರವನ್ನು ಪಾಲಿಬೆಟ್ಟ ಹಿಂದೂ ರುದ್ರ ಭೂಮಿವರೆಗೂ ಹೊತ್ತು ಸಾಗಿದರು. 2.30 ಗಂಟೆಯಿಂದ 4.30 ಗಂಟೆಯವರೆಗೆ ಮಹಿಳೆಯ ಅಂತ್ಯ ಸಂಸ್ಕಾರ ನೆರೆವೇರಿಸಿದರು.




