ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನ : ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ಆಯ್ಕೆ

ಕೊಡಗು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ(ಎನ್‍ಸಿಎಸ್‍ಟಿಸಿ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ನಡೆದ ರಾಜ್ಯ ಮಟ್ಟದ 28 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನ 2020 ದಲ್ಲಿ ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.
ಕೋವಿಡ್- 19 ರ ಮಾರ್ಗಸೂಚಿ ಅನ್ವಯ ಭೌತಿಕ ಸಮ್ಮೇಳನಕ್ಕೆ ಪರ್ಯಾಯವಾಗಿ ಆನ್‍ಲೈನ್ ಮೂಲಕ ನಡೆದ ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಜಿಲ್ಲೆಯ ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಸಿ.ಎಸ್.ರಘುವಂಶಿ ಹಾಗೂ ಕೆ.ಕೆ.ಮಹಿಮ್ ಆಯ್ಕೆಯಾಗಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.
ತಂಡದ ನಾಯಕ ಸಿ.ಎಸ್.ರಘುವಂಶಿ, ಮಡಿಕೇರಿ ನಗರದ ಸಿವಿಲ್ ಎಂಜಿನಿಯರ್ ಸಿ.ಆರ್.ಶಿವಶಂಕರ್ ಮತ್ತು ಶಿಕ್ಷಕಿ ಪಿ.ಸಂಧ್ಯಾ ದಂಪತಿ ಪುತ್ರನಾದರೆ, ಮತ್ತೊಂದು ತಂಡದ ನಾಯಕ ಕೆ.ಕೆ.ಮಹಿನ್, ನಗರದ ವ್ಯಾಪಾರಿ ಕೃಷ್ಣ ಮೋಹನ್ ಮತ್ತು ಶ್ರೀದೇವಿ ದಂಪತಿ ಪುತ್ರ.
ಹಾಗೆಯೇ, ತಂಡದ ಸಹ ಸದಸ್ಯ ಸಮನ್ಯು, ನಗರದ ವಿನ್ಯಾಸ ಗಾರ, ಚಿತ್ರ ಕಲಾವಿದ ರಾಮ್ ಗೌತಮ್ ಮತ್ತು ಅರುಣ ದಂಪತಿ ಪುತ್ರನಾದರೆ ಮತ್ತೊಂದು ತಂಡದ ಸಹ ಸದಸ್ಯ ಪುರಬ್ ಪೊನ್ನಪ್ಪ, ನಗರದ ಮಾತಂಡ ಬಾಬ್ ದೇವಯ್ಯ ಮತ್ತು ಪೊನ್ನಮ್ಮ ದಂಪತಿಯ ಪುತ್ರ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನವು ಆನ್‍ಲೈನ್ ಮೂಲಕ ನಡೆದಿದ್ದು, ಕಿರಿಯ ವಿಜ್ಞಾನಿಗಳು ತಾವಿರುವ ಸ್ಥಳದಿಂದಲೇ ಮಾಹಿತಿಯುಳ್ಳ ಚಾರ್ಟ್ ಮತ್ತು ವಿಡಿಯೊ ಮೂಲಕ ತಮ್ಮ ವೈಜ್ಞಾನಿಕ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಆನ್‍ಲೈನ್ ಮೂಲಕ ನಡೆಸಿದ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯಿಂದ 10 ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಗೊಂಡಿದ್ದರು ಎಂದು ಟಿ.ಜಿ.ಪ್ರೇಮ್ ಕುಮಾರ್ ಅವರು ತಿಳಿಸಿದ್ದಾರೆ.
