ಕೃಷಿಕೊಡಗುಜಿಲ್ಲಾ ಸುದ್ದಿವಿಶೇಷ

ಹವಾಮಾನ ವೈಪರೀತ್ಯ – ಬೆಲೆ ಏರಿಳಿಕೆಯಿಂದ ಕಿತ್ತಳೆ ಬೆಳೆಯಲು ಆಸಕ್ತಿ ತೋರದ ರೈತ

ಕೊಡಗು: ಕಿತ್ತಳೆ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಪೌಷ್ಟಿಕಾಂಶ ತುಂಬಿದ ಹಣ್ಣು. ಪ್ರತಿ ದಿನ ಮೀಡಿಯಂ ಸೈಝ್ ನ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಪ್ರಮಾಣದ ವಿಟಮಿನ್ ‘ಸಿ’ ಮತ್ತು ಪೊಟ್ಯಾಸಿಯಮ್‌ ದೊರಕುತ್ತದೆ. ಕಿತ್ತಳೆ ಅಗಾಧ ಪ್ರಮಾಣದಲ್ಲಿ ‘ಬಿ’ ವಿಟಮಿನ್ ಕೂಡ ಹೊಂದಿದೆ. ಅಂದರೆ ಕಿತ್ತಳೆಯಲ್ಲಿ ತಿಯಾಮಿನ್ ಮತ್ತು ಫೊಲಾಟ್, ಪ್ಲೇವೋನಾಯಿಡ್ಸ್, ಕೆರೊಟೆನಾಯಿಡ್ಸ್ ಹಾಗೂ ಸಿಟ್ರಿಕ್ ಆ್ಯಸಿಡ್ ಕೂಡ ಅಡಗಿದೆ, ಇದರಿಂದ ಕಿತ್ತಳೆ ಮಾನವನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕಿತ್ತಳೆಯ ಮರ ಮನೆಯಲ್ಲಿರುವುದರಿಂದ ಅನೇಕ ಆರೋಗ್ಯಕರ ಉಪಯೋಗಗಳಿವೆ‌.

ಕೊಡಗಿನ ಕಿತ್ತಳೆ ಗಾತ್ರ, ಬಣ್ಣ, ರುಚಿ ಹಾಗೂ ಔಷಧೀಯ ಗುಣಗಳಿಂದ ಬರೀ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವಿಶೇಷ ಫಲವಿದು. ಕಿತ್ತಳೆ ಎಂಬ ಫಲ ವಿಶೇಷದ ಕುಟುಂಬದಲ್ಲಿ ಬರುವ ಪ್ರಭೇದಗಳೆಂದರೆ ಕಿತ್ತಳೆಹಣ್ಣು, ಮೂಸಂಬಿ, ಮ್ಯಾಂಡರಿನ್, ಚಕ್ಕೋತ, ಗ್ರೇಪ್ ಫ್ರೂಟ್ ಹಾಗು ನಿಂಬೆಹಣ್ಣು.

ಭಾರತದಲ್ಲಿನ ಮೂರು ಪ್ರಮುಖ ವಿಧದ ಕಿತ್ತಳೆ ತಳಿಗಳೆಂದರೆ ನಾಗಪುರ ಕಿತ್ತಳೆ, ಖಾಸಿ ಕಿತ್ತಳೆ ಮತ್ತು ಕೊಡಗಿನ ಕಿತ್ತಳೆ. ಕಿತ್ತಳೆ ಸಿಪ್ಪೆಯು ಒಳಗಿನ ಹಣ್ಣಿಗೆ ಬಿಗಿಯಾಗಿ ಅಂಟಿಕೊಳ್ಳುವ ಗುಣವಿಶೇಷದ ಕೊಡಗಿನ ಕಿತ್ತಳೆಯು “ಟೈಟ್ ಜಾಕೆಟ್ ಆರೆಂಜ್” ಅಂತಾನೇ ಪ್ರಸಿದ್ಧ. ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಲ್ಲಿ ನೀರೂರಿಸುವ ಹುಳಿಮಿಶ್ರಿತ ಸಿಹಿಯೇ ಕೊಡಗಿನ ಕಿತ್ತಳೆಯ ವಿಶೇಷ.

ಕೊಡಗಿನಲ್ಲಿ ಕಿತ್ತಳೆ ತಳಿಗೆ 1840ರ ಇತಿಹಾಸವಿದೆ. ಆಗ ಈ ತಳಿಯನ್ನು ಅಲ್ಲಿನ ಬಾಣೆ ಭೂಮಿಯಲ್ಲಿ ಬೆಳೆಯಲು ಪ್ರಾರಂಭಿಸಿದರು. ಕೇವಲ ಎರಡು ದಶಕಗಳ ಹಿಂದೆ ಒಂದು ಲಕ್ಷ ಎಕರೆ ವಿಸ್ತೀರ್ಣದ, ಕಾಫಿತೋಟಗಳ ಮಧ್ಯೆ ಈ ಕೊಡಗು ಕಿತ್ತಳೆಯನ್ನು ಬೆಳೆಯಲಾಗ್ತಿತ್ತು. 1000 ಲಾರಿಗಳ ಕಿತ್ತಳೆ ಲೋಡು ಕೊಡಗಿಂದ ಹೊರಡುತ್ತಿತ್ತು. ಆದರೆ ಈ ವೈಭವಕ್ಕೆ ದೃಷ್ಟಿತಾಗಿದ್ದು ಕೇರಳದಿಂದ 1999ರಲ್ಲಿ ಕೊಡಗಿನ ಈ ಬೆಳೆಯ ಮೇಲೆ ದಾಳಿಗೈದ ಗ್ರೇನಿಂಗ್ ರೋಗದಿಂದಾಗಿ. ಇದರ ಪರಿಣಾಮವಾಗಿ ಕಿತ್ತಳೆ ಫಸಲು ಕೊಡಗಲ್ಲಿ ಕೇವಲ ಎರಡೇ ಎರಡು ವರ್ಷಗಳಲ್ಲಿ ನೆಲಕಚ್ಚಿಬಿಡ್ತು.

ಕೊಡಗಿನ ಕಿತ್ತಳೆ ಹೆಸರಲ್ಲಿ ಕೆಲವರು ಕಳಪೆ ಗುಣಮಟ್ಟದ ಕಿತ್ತಳೆ ಮಾರಾಟಕ್ಕೂ ಶುರುವಿಟ್ಟುಕೊಂಡಾಗ ತೋಟಗಾರಿಕಾ ಇಲಾಖೆ ಚುರುಕಾಯ್ತು. ಕೊಡಗಿನ ಕಿತ್ತಳೆಗೆ ತಗುಲುವ ಗ್ರೇನಿಂಗ್ ರೋಗ ನಿಯಂತ್ರಣಕ್ಕೆ ಪ್ರಯತ್ನಗಳು ಆರಂಭವಾಯ್ತು. ರೈತರಿಗೆ ಮತ್ತೊಮ್ಮೆ ಈ ತಳಿಯನ್ನು ಬೆಳೆಯಲು ಪ್ರೋತ್ಸಾಹಿಸಲಾಯ್ತು. ಅದರ ಪರಿಣಾಮವಾಗಿ ಇತ್ತೀಚೆಗೆ ಮತ್ತೊಮ್ಮೆ ಕೊಡಗಿನ ಕಿತ್ತಳೆ ತನ್ನ ಎಂದಿನ ವೈಭವವನ್ನು ತೋರಿಸಲು ಸಜ್ಜಾಗುತ್ತಿದೆ. ಬೆಲೆಯ ಏರಿಳಿತಗಳು, ಬೀಕರ ಮಳೆ, ಹವಾಮಾನ ವೈಪರೀತ್ಯಗಳು ಕಿತ್ತಳೆ ಬೆಳೆಗಾರರನ್ನು ಹೈರಾಣಾಗಿಸಿದೆ. ಈ ಹಿಂದೆ ಬೆಳೆಯುತ್ತಿದ್ದಷ್ಟು ಕಿತ್ತಳೆ ಬೆಳೆಯನ್ನು ಈಗ ಬೆಳೆಯಲು ಬೆಳೆಗಾರರು ಆಸಕ್ತಿ ತೋರುತ್ತಿಲ್ಲ.

ದಕ್ಷಿಣ ಭಾರತದಲ್ಲಿ ಕೊಡಗಿನ ಕಿತ್ತಳಿಯನ್ನು ಹಲವಾರು ವರ್ಷಗಳಿಂದ ಬೆಳೆಯಲ್ಪಡುತ್ತಿದ್ದು, ನಿಧಾನವಾಗಿ ಕಾಫಿ ತೋಟಗಳಲ್ಲಿ ಮುಖ್ಯ ಬೆಳೆಯಾಗಿ ನೆಲೆಯೂರಿತು. ತನ್ನ ಪ್ರಾಮುಖ್ಯತೆ ಮತ್ತು ಅನುಪಮ ಗುಣಗಳಿಂದಾಗಿ ಕೊಡಗಿನ ಕಿತ್ತಳೆಗೆ 2005-06ರಲ್ಲಿ ಭೌಗೋಳಿಕ ಸೂಚಕ ಸ್ಥಾನಮಾನ ದೊರಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button