ಕೊಡಗುಜಿಲ್ಲಾ ಸುದ್ದಿ

ವೀಕೆಂಡ್ ಕರ್ಫ್ಯೂಗೆ ಬೆಂಬಲವಿಲ್ಲ – ಕೊಡಗು ಪ್ರವಾಸೋದ್ಯಮ ಒಕ್ಕೂಟ ಸೆಡ್ಡು

ಕೊಡಗು: ಕೋವಿಡ್ ಅತಿರೇಕವಿಲ್ಲದೆ ಸಹಜ ಸ್ಥಿತಿಯಲ್ಲಿರುವ ಕೊಡಗು ಜಿಲ್ಲೆಯಲ್ಲೂ ವೀಕೆಂಡ್ ಕರ್ಪ್ಯೂ ವಿಧಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಮತ್ತು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಆದೇಶವಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು, ವೀಕೆಂಡ್ ಕರ್ಪ್ಯೂಗೆ ನಮ್ಮ ಬೆಂಬಲವಿಲ್ಲ, ಪ್ರವಾಸೋದ್ಯಮಕ್ಕೆ ಅಡಚಣೆ ಉಂಟು ಮಾಡಿದರೆ ಹೋರಾಟ ರೂಪಿಸಲು ಸಿದ್ಧವೆಂದು ಎಚ್ಚರಿಕೆ ನೀಡಿದರು.

ಕಳೆದ 2 ವರ್ಷಗಳಿಂದ ಕೋವಿಡ್ ಲಾಕ್‌ಡೌನ್ ನಿಂದ ಕೊಡಗಿನ ಜನ ಮತ್ತು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ,
ಆಟೋರಿಕ್ಷಾ ಮಾಲೀಕ, ಚಾಲಕರು ಹಾಗೂ ಹೋಟೆಲ್ ಉದ್ಯಮಿಗಳು ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದಾರೆ.

ಎಲ್ಲರೂ ಸಂಕಷ್ಟದಲ್ಲಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೆ ನಷ್ಟಕ್ಕೆ ದೂಡಿ ಸಾಲಗಾರರನ್ನಾಗಿ ಮಾಡಲು ವೀಕೆಂಡ್ ಕರ್ಪ್ಯೂನಂತಹ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದು ಟೀಕಿಸಿದರು.

ಕೊಡಗಿನಲ್ಲಿ ಸೋಂಕು ಅತಿಯಾಗಿ ವ್ಯಾಪಿಸದಿದ್ದರೂ ಕರ್ಪ್ಯೂ ಅನ್ವಯವಾಗುವಂತೆ ಮಾಡಿರುವುದು ಸರಿಯಲ್ಲ, ಜಿಲ್ಲಾಡಳಿತ ಇಲ್ಲಿನ ನೈಜ ಸ್ಥಿತಿಗತಿಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು.

ಇನ್ನು 3- 4 ತಿಂಗಳಿನಲ್ಲಿ ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಚಟುವಟಿಕೆಯ ಕಾಲದಲ್ಲಿ ಇಲ್ಲಸಲ್ಲದ ನಿರ್ಬಂಧಗಳನ್ನು ಹೇರುವ ಮೂಲಕ ಸರಕಾರ ಜನ ಸಾಮಾನ್ಯರನ್ನು ಕಷ್ಟಕ್ಕೆ ದೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ವೀಕೆಂಡ್ ಕರ್ಪ್ಯೂವನ್ನು ಕೈಬಿಡಬೇಕು ಮತ್ತು ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದರು.

ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಅವಲಂಬಿತರು ಕರ್ಪ್ಯೂ ನಿಯಮ ಪಾಲಿಸಲು ತಯಾರಿಲ್ಲ. ಪ್ರವಾಸೋದ್ಯಮದ ವಿರುದ್ದ ಕ್ರಮ ತೆಗೆದುಕೊಂಡರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button