ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಮಂತ್ರಿ ರಾಜೀನಾಮೆಗೆ ಕರವೇ ಒತ್ತಾಯ

ಬಾಗಲಕೋಟೆ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ವೈಫಲ್ಯ ಹಾಗೂ ಗೃಹ ಸಚಿವ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯವನ್ನು ಬಿಜೆಪಿ ಉತ್ತರ ಪ್ರದೇಶ ಮಾಡಲು ಹೊರಟಿದೆ. ಬಿಜೆಪಿ ಪಕ್ಷದವರು ಭಾರತ್ ಮಾತಾ ಕೀ ಜೈ ಎನ್ನುವವರು ಒಬ್ಬ ಭಾರತ ಮಾತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ತಪ್ಪಿಸಲು ಆಗಲಿಲ್ಲವೆಂದರೆ ನಿಜಕ್ಕೂ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬುಡಮೇಲಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ.
ರಾಜ್ಯದಲ್ಲಿ ಅಪ್ರಾಪ್ತ ಯುವತಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ಗೃಹ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ದುರ್ಘಟನೆಯ ನೈತಿಕ ಹೊಣೆ ಹೊತ್ತು ಮೈಸೂರು ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ರಾಜ್ಯದ ಗೃಹಮಂತ್ರಿಗಳು ರಾಜೀನಾಮೆ ನೀಡಬೇಕು, ಪ್ರಧಾನಿ ನರೇಂದ್ರ ಮೋದಿ ಭೇಟಿ ಪಡಾವೋ ಭೇಟಿ ಬಚಾವೋ ಎನ್ನುತ್ತಾರೆ. ಆದರೆ ಯುವತಿಯರು ರಕ್ಷಣೆ ಎಲ್ಲಿ ಆಗುತ್ತಿದೆ, ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಗೃಹ ಸಚಿವರ ಮನೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತ್ಯಂತ ಸಂಸ್ಕಾರ ಮತ್ತು ಸೃಜನಶೀಲ ರಾಜ್ಯವಾಗಿದೆ ಆದರೆ ಇತ್ತೀಚೆಗೆ ಆರಂಭವಾದ ಉತ್ತರದ ರಾಜ್ಯಗಳ ಜನರ ನಿರಂತರ ವಲಸೆಯಿಂದಾಗಿ ಅತ್ಯಾಚಾರ, ಕೊಲೆ, ಕಳ್ಳತನ, ದರೋಡೆ ಸೇರಿದಂತೆ ವಿವಿಧ ರೀತಿಯ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 2019 ರಲ್ಲಿ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಉತ್ತರ ಭಾರತದ ಅಪರಾಧಿಗಳ ಬಂಧನವಾದ ಬಗ್ಗೆ ಮತ್ತು ಶಿಕ್ಷೆ ವಿಧಿಸಿದ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬರಲಿಲ್ಲ, ವಿಜಯಪುರದಲ್ಲಿ ದಾನಮ್ಮ ಎಂಬ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಏನಾಯಿತು ಎಂದು ಗೃಹ ಇಲಾಖೆ ಸಾರ್ವಜನಿಕರ ಗಮನಕ್ಕೆ ತಂದಿಲ್ಲ. ಅತ್ಯಾಚಾರಿಗಳ ಬಂಧನ ಮತ್ತು ಅವರಿಗೆ ವಿಧಿಸಿದ ಶಿಕ್ಷೆಯ ಬಗ್ಗೆ ಜನರ ಗಮನಕ್ಕೆ ತರದೇ ಇರುವುದರಿಂದ ಇಂತಹ ದುರ್ಘಟನೆಗಳು ಪುನರಾವರ್ತನೆ ಆಗುತ್ತಿವೆ.ಗೃಹ ಇಲಾಖೆ ರಾಜ್ಯದ ಯುವತಿಯರು ಹಾಗೂ ಮಹಿಳೆಯರಿಗೆ ರಕ್ಷಣೆ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಆದ ಕಾರಣ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.




