ಕಸಾಪವನ್ನು ಜನಸಾಮಾನ್ಯರ ಪರಿಷತ್ ಮಾಡುವ ಗುರಿ: ಡಾ. ಮಹೇಶ್ ಜೋಷಿ ಇಂಗಿತ

ರಾಮನಗರ : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ನ್ನು ‘ಜನಸಾಮಾನ್ಯರ ಪರಿಷತ್’ ಆಗಿ ರೂಪಿಸುವ ಗುರಿಯೊಂದಿಗೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಸೇವಾಕಾಂಕ್ಷಿಯಾಗಿ ಭಾಗಿಯಾಗುತ್ತಿದ್ದೆನೆಯೆ ಹೊರತು ಯಾವುದೇ ಅಧಿಕಾರದ ಲಾಲಸೆ ಮತ್ತು ಪುನರ್ವಸತಿಗಾಗಿ ಬರುತ್ತಿಲ್ಲ. ನಾನು ಸೇವಾಕಾಂಕ್ಷಿಯೇ ಹೊರತು ಸ್ಪರ್ಧಿಯಲ್ಲ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಸ್ವತ್ತಾಗಿ ಪರಿವರ್ತಿಸಿ, ಜನ ಸಮಾನ್ಯರ ಪರಿಷತ್ತನ್ನಾಗಿಸುವ ಧ್ಯೇಯ ನನ್ನದು. ಈ ನಿಟ್ಟಿನಲ್ಲಿ ನನ್ನ ಕನಸಿನ ಯೋಜನೆ ಮತ್ತು ಯೋಚನೆಗಳನ್ನು ಚುನಾವಣಾ ಪ್ರಣಾಳಿಕೆ ಮೂಲಕ ಹಂಚಿಕೊಳ್ಳುತ್ತಿರುವುದಾಗಿ ಹೇಳಿದರು.
ನಿಬಂಧನೆಗಳ ಪರಿಷ್ಕರಣೆ :
ಯುವ ಸಾಹಿತಿಗಳನ್ನು ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತೇನೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಹಿಲೆಯರು ಸರ್ವಾಧ್ಯಕ್ಷ ಸ್ಥಾನಮಾನ, ಎಲ್ಲಾ ತಾಲೂಕುಗಳಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
ರಾಜಕೀಯದಲ್ಲಿ ತಟಸ್ಥನಾಗಿ, ಎಡ – ಬಲ ಪಂಥ ಅಥವಾ ಯಾವುದೇ ಪಂಥಕ್ಕೆ ಸೇರದೆ ಮಾನವ ಪಂಥದ ಮೌಲ್ಯಗಳಿಗೆ ಒತ್ತು ನೀಡಿ, ಕನ್ನಡ ಪಂಥದ ಸೇವಕನಾಗಿ ಕಾರ್ಯನಿರ್ವಹಿಸುವುದಾಗಿ ಜೋಶಿ ತಮ್ಮ ಚಿಂತನೆ, ಕಾರ್ಯ ವಿಧಾನಗಳನ್ನು ಸ್ಪಷ್ಟಪಡಿಸಿದರು.
ಈ ಹಿಂದೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿಯೇ ನಡೆಸಲಾಗುತ್ತಿತ್ತು. ಈ ಕುರಿತು ಸಾಕಷ್ಟು ಹೋರಾಟ ನಡೆಸಲಾಗಿತ್ತು. ಕನ್ನಡಿಗರ ಹೋರಾಟಕ್ಕೆ ಮಣಿದು ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಸಾಧ್ಯವಾಗಿದೆ. ಕಸಾಪ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದರೆ, ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ಯ ಪ್ರಿಲಿಮನರಿ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿಯೇ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.




