Childrens: ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವೈರಲ್ ಫೀವರ್

ಕಲಬುರಗಿ: ಕೊರೊನಾ ಮೂರನೇ ಅಲೆ ವಕ್ಕರಿಸುತ್ತೆ ಅನ್ನೋ ಆತಂಕದಲ್ಲಿರುವಾಗಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದೀಗ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಹಾವಳಿ ಶುರುವಾಗಿದ್ದು, ಆಸ್ಪತ್ರೆಗಳ ಬೆಡ್ ಫುಲ್ ಆಗಿ ಜನ ತತ್ತರಿಸಿ ಹೋಗುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಎಲ್ಲಿ ನೋಡಿದ್ರು ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿವೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಒಂದೆ ತಿಂಗಳಲ್ಲಿ ಬರೋಬ್ಬರಿ 158 ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಅದರಲ್ಲಿ ಶೇಕಡಾ 50 ರಷ್ಟು ಮಕ್ಕಳು ಡೆಂಗ್ಯೂನಿಂದ ಬಳಲುತ್ತಿದ್ದಾರೆ ಅನ್ನೋದು ಪೋಷಕರಲ್ಲಿ ಆತಂಕ ಮೂಡಿಸಿದೆ.
6 ಜಿಲ್ಲೆಗಳಲ್ಲಿ ವೈರಲ್ ಫೀವರ್ ಮತ್ತು ಡೆಂಗ್ಯೂ ವಿವರ:
ಕಳೆದ ಜನೆವರಿಯಿಂದ ಇಲ್ಲಿವರೆಗೆ ಪತ್ತೆಯಾದ ಡೆಂಗ್ಯೂ- ವೈರಲ್ ಫೀವರ್ ಮಾಹಿತಿ
*ಕಲಬುರಗಿ- ಡೆಂಗ್ಯೂ ರೋಗಿಗಳ ಸಂಖ್ಯೆ-266, ವೈರಲ್ ಫೀವರ್ 2500ಕ್ಕೂ ಅಧಿಕ ರೋಗಿಗಳು.
*ಬೀದರ- ಡೆಂಗ್ಯೂ ರೋಗಿಗಳ ಸಂಖ್ಯೆ-80, ವೈರಲ್ ಫೀವರ್-300
*ಯಾದಗಿರಿ- ಡೆಂಗ್ಯೂ ರೋಗಿಗಳ ಸಂಖ್ಯೆ-10, ವೈರಲ್ ಫೀವರ್-300.
*ಕೊಪ್ಪಳ- ಡೆಂಗ್ಯೂ ರೋಗಿಗಳ ಸಂಖ್ಯೆ-25, ವೈರಲ್ ಫೀವರ್-250
*ಬಳ್ಳಾರಿ- ಡೆಂಗ್ಯೂ ರೋಗಿಗಳ ಸಂಖ್ಯೆ -90, ವೈರಲ್ ಫೀವರ್- 200.
*ರಾಯಚೂರು- ಡೆಂಗ್ಯೂ ರೋಗಿಗಳ ಸಂಖ್ಯೆ-80, ವೈರಲ್ ಫೀವರ 2000. ಇದರಲ್ಲಿ 6 ವರ್ಷದ ಒಳಗಿನ ಒಟ್ಟು ಮೂರು ಬಾಲಕರು ಸಾವನ್ನಪ್ಪಿದ್ದಾರೆ. ಇದರ ಜೊತೆ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಕೆಲ ಬಾಲಕರು ಸಾವಿಗೆ ಇಡಾಗಿರುವ ವರದಿಯಾಗಿದೆ.
ಭಯಾನಕ ರೋಗಗಳು ಬಾದಿಸಲು ಕಾರಣ ಏನು?:
ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರೋದ್ರಿಂದ ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಫೀವರ್ ನಂತಹ ರೋಗಗಳು ಜನರನ್ನ ಬಾಧಿಸುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರೋಗಗಳು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತು ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ, ಎಲ್ಲೆಂದರಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ, ಬಡಾವಣೆಗಳಲ್ಲಿ ಕಸದ ರಾಶಿ ಕಾಣಿಸುತ್ತಿದ್ದು, ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲದ ಕಾರಣ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ವೈರಲ್ ಫೀವರ್ ಉಲ್ಬಣಗೊಂಡು ಜನರು ರೋಗಗಳಿಗೆ ತುತ್ತಾಗುವಂತಾಗಿದೆ ಅಂತ ಸಾರ್ವಜನಿಕರು ಆರೋಪ ಮಾಡ್ತಿದ್ದಾರೆ.
ಅಕ್ಟೋಬರ್- ನವೆಂಬರ್ ನಲ್ಲಿ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ವಕ್ಕರಿಸುತ್ತೆ ಅನ್ನೋ ತಜ್ಞರ ಮಾಹಿತಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಮಕ್ಕಳಿಗೆ ಡೆಂಗ್ಯೂ ವಕ್ಕರಿಸುತ್ತಿರೋದು, ಇದು ಡೆಂಗ್ಯೂನಾ ಅಥವಾ ಕೋವಿಡ್ ಮೂರನೇ ಅಲೆನಾ ಅನ್ನೋ ಟೆನ್ಛನ್ ಪೋಷಕರಲ್ಲಿ ಮನೆ ಮಾಡಿದೆ. ಸರ್ಕಾರ ಈ ಭಾಗದ ಜಿಲ್ಲಾಢಳಿತಗಳಿಗೆ ಸೂಕ್ತ ನಿರ್ದೇಶನ ನೀಡಿ ಮುಂದಿನ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ.




