ಉತ್ತರ ಕನ್ನಡಜಿಲ್ಲಾ ಸುದ್ದಿ

ಕಾರವಾರ ನಗರಸಭೆಯಿಂದ ಕಾಳಿ ನದಿ ಸ್ವಚ್ಛತೆಗೆ 29 ಕೋಟಿ ರೂ.ವೆಚ್ಚದ ಯೋಜನೆ

ಕಾರವಾರ : ಕಾಳಿ ನದಿ ಉತ್ತರ ಕನ್ನಡದ ಜೀವ ನದಿ. ಕೃಷಿ, ಮೀನುಗಾರಿಕೆ ಸೇರಿದಂತೆ ಹತ್ತು ಹಲವು ವಿಧದಲ್ಲಿ ಜೀವನಾಡಿಯಾಗಿ ಜಿಲ್ಲೆಯ ಜನರಿಗೆ ಆಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ನಿರ್ಲಕ್ಷ್ಯದಿಂದಾಗಿ ನಗರದ ತ್ಯಾಜ್ಯ ನದಿಗೆ ಸೇರುತ್ತಿರುವುದರಿಂದ ಕಾಳಿ ನದಿ ಮಲಿನಗೊಂಡಿತ್ತು. ಈ ನಿಟ್ಟಿನಲ್ಲಿ ಕಾಳಿ ನದಿಯನ್ನು ಶುದ್ಧವಾಗಿಡಲು ಕಾರವಾರ ನಗರಸಭೆ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಜೋಯಿಡಾ ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹುಟ್ಟಿ,ಕಾರವಾರದಲ್ಲಿ ಸಮುದ್ರವನ್ನು ಸೇರುವ ಕಾಳಿ ನದಿಗೆ ನಿರ್ಮಿಸಲಾಗಿರುವ 5 ಜಲಾಶಯಗಳಿಂದ ಒಂದೆಡೆ ವಿದ್ಯುತ್ ಉತ್ಪಾದನೆಯಾದರೆ, ಇನ್ನೊಂದೆಡೆ ಕೃಷಿ, ಮೀನುಗಾರಿಕೆ, ಕುಡಿಯುವ ನೀರು ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಜಿಲ್ಲೆಯ ಜನರ ಜೀವನಾಡಿಯಾಗಿದೆ.

ನದಿ ನೀರನ್ನು ಅವಲಂಭಿಸಿಕೊಂಡು ಸಾವಿರಾರು ಕುಟುಂಬಗಳು ನದಿ ಪಾತ್ರದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜತೆಗೆ ಪ್ರವಾಸೋದ್ಯಮಕ್ಕೂ ನೆರವಾಗಿದೆ.ಇಂತಹ ಬಹುಪಯೋಗಿ ಕಾಳಿ ನದಿ ಇತ್ತೀಚಿನ ವರ್ಷಗಳಲ್ಲಿ ನಗರದ ತ್ಯಾಜ್ಯದಿಂದಾಗಿ ಮಲಿನಗೊಳ್ಳುವಂತಾಗಿದೆ. ನದಿ ಪಾತ್ರದಲ್ಲಿರುವ ನಗರ ಪ್ರದೇಶದ ಮನೆಗಳಿಂದ ತ್ಯಾಜ್ಯ ನೀರು ಕಾಳಿ ನದಿಗೆ ನೇರವಾಗಿ ಸೇರುತ್ತಿದೆ.ಪರಿಣಾಮ ಕಾಳಿ ನದಿ ಕಲುಷಿತಗೊಂಡಿದೆ. ಕೆಲ ವರ್ಷಗಳ ಹಿಂದೆ ಈ ಕುರಿತು ಅಧ್ಯಯನ ಮಾಡಿದ್ದ ತಂಡವೊಂದು ಕಾಳಿ ನದಿ ನೀರು ಮಲೀನಗೊಂಡಿರುವುದಾಗಿ ವರದಿ ನೀಡಿತ್ತು.

ಅಲ್ಲದೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗುರುತಿಸಿರುವ ಕಲುಷಿತಗೊಂಡ 17 ನದಿಗಳ ಪಟ್ಟಿಯಲ್ಲಿ ಕಾಳಿ ನದಿಯನ್ನು ಸಹ ಸೇರ್ಪಡೆಗೊಳಿಸಿದೆ. ಈ ನಿಟ್ಟಿನಲ್ಲಿ ಕಾಳಿ ನದಿಗೆ ತ್ಯಾಜ್ಯ ಸೇರುವುದನ್ನು ತಪ್ಪಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 29 ಕೋಟಿ ರೂ.ವೆಚ್ಛದಲ್ಲಿ ಒಳಚರಂಡಿ ಯೋಜನೆಯೊಂದನ್ನು ರೂಪಿಸಿದೆ.

ಕಾರವಾರ ನಗರ ವ್ಯಾಪ್ತಿಯ ಕಾಳಿ ನದಿ ಪಾತ್ರದ ಹಲವು ಮನೆಗಳಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮನೆಯ ತ್ಯಾಜ್ಯ,ಶೌಚಾಲಯದ ನೀರನ್ನ ನೇರವಾಗಿ ನದಿಗೆ ಹರಿಸುತ್ತಿದ್ದಾರೆ. ಇದರಿಂದಾಗಿ ಕಾಳಿ ನದಿ ನೀರು ಮಲಿನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈ ಯೋಜನೆಯಡಿ ನದಿ ಪಾತ್ರದ ಮನೆಗಳಿಗೆ ಮೊದಲು ಸೂಕ್ತ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಈ ಮೂಲಕ ಮನೆಗಳ ತ್ಯಾಜ್ಯ ನೀರನ್ನ ರಾಜಕಾಲುವೆಗೆ ಸಂಪರ್ಕಿಸಿ ನಂತರ ಅದನ್ನು ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಿಸಿ ಬೇರೆಡೆ ಬಿಡಲಾಗುತ್ತದೆ.ಇದರೊಂದಿಗೆ ತ್ಯಾಜ್ಯ ನೀರನ್ನ ನದಿಗೆ ಸೇರಿಸುವ ಮನೆಗಳಿಗೆ ಎಚ್ಚರಿಕೆ ನೀಡುವುದರ ಜತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರಸಭೆ ಸಿದ್ಧತೆ ನಡೆಸಿದೆ. ಈಗಾಗಲೇ ಯೋಜನೆ ಪ್ರಾರಂಭಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಕಾರವಾರ ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button