ನಾಲ್ಕು ವರ್ಷಗಳ ನಂತರ ಕಲಬುರ್ಗಿ ಮಹಾನಗರ ಪಾಲಿಕೆಗೆ ಚುನಾವಣೆ

ಕಲಬುರ್ಗಿ: ನಾಲ್ಕು ವರ್ಷಗಳ ನಂತರ ಕಲಬುರ್ಗಿ ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ನೀಡಿದೆ.
ಕೊರೊನಾ ಆತಂಕದ ನಡುವೆಯೇ ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ದಿಢೀರ್ ದಿನಾಂಕ ನಿಗಧಿ ಮಾಡಿದೆ. ಹಲವು ತಾಂತ್ರಿಕ ಕಾರಣಗಳದಾಗಿ ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ಇಲ್ಲದೆ ಅಧಿಕಾರಿಗಳ ಮೇಲೆ ಅವಲಂಭಿತವಾಗಿದ್ದ ಕಲಬುರ್ಗಿ ಮಹಾನಗರ ಪಾಲಿಕೆಗೆ ಈಗ ಮತ್ತೆ ಚುನಾಯಿತ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಾಲಿಕೆಯ ಮಾಜಿ ಸದಸ್ಯರು ಸೇರಿದಂತೆ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಟಿಕೆಟ್ ಗಾಗಿ ಲಾಭಿ ಸಹ ಶುರು ಮಾಡಿದ್ದಾರೆ. ಆಡಳಿತಾರೂಢ ಬಿಜೆಪಿಯಲ್ಲಿಯೇ ಟೀಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಚುನಾವಣೆಗೆ ಸ್ಪರ್ಧಿಸಬೇಕು ಎಂದು ಗಮನದಲ್ಲಿಟ್ಟುಕೊಂಡು ಹಲವರು ಕೊರೊನಾ ಸಮಯದಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಹಿಳಾ ಮತದಾರರೇ ನಿರ್ಣಾಯಕರು:
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ ಗಳಿವೆ. ಕಳೆದ ಏಪ್ರೀಲ್ 2016ರಲ್ಲಿ ಮೇಯರ್ ಆಗಿದ್ದ ಶರಣಕುಮಾರ ಮೋದಿ ಅವರ ಅವಧಿ ಪೂಣಗೊಂಡ ನಂತರ ಪಾಲಿಕೆ ಜನಪ್ರತಿನಿಧಿಗಳು ಆಡಳಿತ ಅವಧಿ ಮುಗಿದಿತ್ತು. ಅಂದಿನಿಂದ ಇಂದಿನವರೆಗೂ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳೇ ಇರಲಿಲ್ಲ. ಇಷ್ಟೊಂದು ಸುಧೀರ್ಘ ಕಾಲ ಜನಪ್ರತಿನಿಧಿಗಳಿಲ್ಲದೆ ಇದ್ದದ್ದು ಇದೇ ಮೊದಲ ಸಲ ಅನ್ನೋದು ಗಮನಾರ್ಹ. ಚುನಾಯಿತ ಪ್ರತಿನಿಧಿಗಳು ಇಲ್ಲದೆ ಹಲವು ಬಡಾವಣೆಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. 55 ವಾರ್ಡ್ ಗಳ ವ್ಯಾಪ್ತಿಯಲ್ಲಿ 2,58,775 ಪುರುಷ, 2,60,543 ಮಹಿಳಾ, 146 ಇತರೆ ಮತದಾರರು ಸೇರಿ ಒಟ್ಟು 5,19,464 ಜನ ಮತದಾನ ಹಕ್ಕು ಹೊಂದಿದ್ದಾರೆ.ಮಹಿಳಾ ಮತದಾರರ ಹೆಚ್ಚಿರುವುದರಿಂದ ಅವರೇ ನಿರ್ಣಾಯಕ ಮತದಾರರಿದ್ದಾರೆ.
ಮೇಯರ್ ಎಸ್ಟಿ- ಉಪಮೇಯರ್ ಬಿಸಿಎ ಮಿಸಲಾತಿ:
ಮೇಯರ್ ಸ್ಥಾನಕ್ಕೆ ಈಗಾಗಲೆ ಎಸ್ಟಿ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಸಿಎ ಮೀಸಲಾತಿ ನಿಗದಿಯಾಗಿದೆ. 55 ವಾರ್ಡ್ಗಳಲ್ಲಿ 24 ವಾರ್ಡ್ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಕಲಬುರಗಿ ಪಾಲಿಕೆಗೆ ಆ.16 ರಂದು ಅಧಿಸೂಚನೆ. ಆ.23 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಆ 24ರಂದು ನಾಮಪತ್ರಗಳ ಪರಿಶೀಲನೆ. ಆ 26ರಂದು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನಾಂಕ. ಸೆ.03ರಂದು ಮತದಾನ. ಅಗತ್ಯವಾದಲ್ಲಿ ಸೆ.05ಕ್ಕೆ ಮರುಮತದಾನ. ಸೆ.06 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಆದೇಶದಲ್ಲಿ ತಿಳಿಸಿದೆ.




