
ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ಜೇಮ್ಸ್ ಜಾತ್ರೆಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ನಗರದ ಸಂಗಮ, ತ್ರಿವೇಣಿ ಟಾಕೀಸ್ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗಿದ್ದು ಅಪ್ಪು ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಸಿನೆಮಾ ವೀಕ್ಷಣೆ ಮುನ್ನ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸಿನೆಮಾ ಶುರುವಾಗ್ತಿದ್ದಂತೆ ಪರದೆಯ ಬಳಿ ಹೋಗಿ ಸೆಲ್ಫಿ ತೆಗೆದುಕೊಂಡರು. ಇದೇ ವೇಳೆ ಅಪ್ಪು ಎಂಟ್ರಿ ಕೊಟ್ಟ ತಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ಇನ್ನೂ ಚಿತ್ರ ಮುಗಿಸಿ ಹೊರಬಂದವರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
ಪುನೀತ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನಲೆ ಸಂಗಮ ಚಿತ್ರಮಂದಿರ ಮುಂದೆ ತಮಟೆ ಸೌಂಡ್ ಗೆ ಅಭಿಮಾನಿಗಳು ಮೈಮರೆತು ಸ್ಟೆಪ್ ಹಾಕಿದರು. ಮಂಗಳ ಮುಖಿಯರು ಸೇರಿದಂತೆ ಅಭಿಮಾನಿಗಳು, ಯುವಕರು ಚಿತ್ರಮಂದಿರದ ಮುಂದೆ ಅಪ್ಪು ಭಾವಚಿತ್ರ ಹಿಡಿದು ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಅಪ್ಪು ಅಪ್ಪು ಅಂತಾ ಕೂಗಿ ಅಭಿಮಾನ ವ್ಯಕ್ತಪಡಿಸಿದರು.
ಜೇಮ್ಸ್ ನೋಡಲು ತಾಳ್ಮೆ ಕಳೆದುಕೊಂಡ ಅಭಿಮಾನಿಗಳು
ಕಲಬುರಗಿ ನಗರದ ಸಂಗಮ್ ಚಿತ್ರ ಮಂದಿರದಲ್ಲಿ ಜೇಮ್ಸ್ ಸಿನಿಮಾ ನೋಡಲು ಮುಗಿಬಿದ್ದ ಅಪ್ಪು ಫ್ಯಾನ್ಸ್ ಸೆಕೆಂಡ್ ಶೋ ನಡೆಯುತ್ತಿದ್ದರೂ ಡೋರ್ ಓಪನ್ ಮಾಡುವಂತೆ ಪಟ್ಟು ಹಿಡಿದು ತಾಳ್ಮೆ ಕಳೆದುಕೊಂಡರು. ಥಿಯೇಟರ್ ಡೋರ್ ಒಡೆಯಲು ಯತ್ನಿಸಿದರು. ಡೋರ್ ತೆಗೆಯದಿದ್ದಾಗ ಡೋರ್ ಬಳಿಯೇ ಶಿಳ್ಳೆ, ಬೊಬ್ಬೆ ಹೊಡೆದು ಪರಮಾತ್ಮನಿಗೆ ಅಭಿಮಾನಿಗಳು ಜೈಕಾರ ಹಾಕಿದರು. ಇನ್ನು ಟಿಕೆಟ್ ಪಡೆಯಲು ನೂಕು ನುಗ್ಗಲು ಸಹ ಉಂಟಾಯಿತು.
47 ಕೆ.ಜಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ಹಾಗೂ ಅಪ್ಪು 47 ನೇ ಹುಟ್ಟು ಹಬ್ಬದ ಹಿನ್ನೆಲೆ ಅಭಿಮಾನಿಗಳು 47 ಕೆ.ಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿದರು. ನಗರದ ಸಂಗಮ ಮಂದಿರದಲ್ಲಿ ಡಾ:ರಾಜಕುಮಾರ್, ಅಪ್ಪು ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಬರ್ತಡೇ ಸೆಲೆಬ್ರೆಷನಲ್ಲಿ ಭಾಗಿಯಾದ ಉದ್ಯಮಿ ನಿತಿನ್ ಗುತ್ತೇದಾರ್ ಅವರು ಕೇಕ್ ಕತ್ತರಿಸಿದರು.
ಒಟ್ಟಾರೆ ಹಾಡು, ಕುಣಿತ, ಜೋಷ್ ಎಲ್ಲವೂ ಜೇಮ್ಸ್ ಅಂಗಳದಲ್ಲಿ ಜೋರಾಗಿದ್ದು ಕಲರ್ ಫುಲ್ ಸಂಭ್ರಮಕ್ಕೆ ಅಪ್ಪು ಹುಟ್ಟುಹಬ್ಬ ಜೊತೆಗೆ ಸಿನೆಮಾ ರಿಲೀಸ್ ಪವರ್ ಸ್ಟಾರ್ ಫ್ಯಾನ್ಸ್ ಗೆ ಡಬಲ್ ಧಮಾಕಾ ಕೊಟ್ಟಂತಿತ್ತು.




