ಪೊಲೀಸ್ ಸರ್ಪಗಾವಲಿನಲ್ಲಿ ನಾಳೆ ಪಾಲಿಕೆ ಮತ ಏಣಿಕೆ: 300 ಅಭ್ಯರ್ಥಿಗಳ ಹಣೆಬರಹ ಬಹಿರಂಗ

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಳೆ ಮತ ಎಣಿಕೆ ನಡೆಯಲಿದ್ದು, 300 ಅಭ್ಯರ್ಥಿಗಳ ಭವಿಷ್ಯ ನಾಳೆ ಹೊರಬಿಳಲಿದೆ. ಮತ ಎಣಿಕೆಗೆ ಸರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಲಬುರಗಿ ನಗರದ ನೂತನ ವಿದ್ಯಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನಾಳೆ ಬೆಳಿಗ್ಗೆ 7:45 ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುತ್ತದೆ. ಬೆಳಿಗ್ಗೆ 08 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದ್ದು, ಮತ ಎಣಿಕೆಗಾಗಿ 11 ಕೌಂಟಿಗ್ ಹಾಲ್ ಸಿದ್ಧಪಡಿಸಲಾಗಿದೆ. ಒಂದೊಂದು ಕೌಂಟಿಂಗ್ ಹಾಲ್ ಗೆ ಓರ್ವ ಆರ್ ಓ ನೇಮಕ ಮಾಡಲಾಗಿದೆ. ಪ್ರತಿ ಮತ ಎಣಿಕೆ ಹಾಲ್ ನಲ್ಲಿ 05 ಟೇಬಲ್ ಗಳ ವ್ಯವಸ್ಥೆ ಮಾಡಲಾಯಿತು. ಒಂದೊಂದು ಕೌಂಟಿಂಗ್ ಹಾಲ್ ನಲ್ಲಿ 05 ವಾರ್ಡ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆ ಕಾರ್ಯಕ್ಕೆ 55 ತಂಡಗಳ ನಿಯೋಜಿಸಲಾಗಿದೆ. ಒಟ್ಟು 55 ಚುನಾವಣಾಧಿಕಾರಿ ಹಾಗೂ 55 ಜನ ಎಣಿಕೆ ಸಹಾಯಕರು ಇರಲಿದ್ದಾರೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 110 ಸಿಬ್ಬಂದಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ವಿ ವಿ ಜ್ಯೋತ್ಸ್ನಾ ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿ:
ಮತ ಎಣಿಕೆ ಹಿನ್ನೆಲೆ ಇಂದು ಸಂಜೆ 6 ರಿಂದ ನಾಳೆ ರಾತ್ರಿ 12 ವರೆಗೆ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ. ಕೌಂಟಿಗ್ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿಜಯೋತ್ಸವಕ್ಕೆ ನಿರ್ಭಂಧ ತರಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸ್ಯಾನಿಟೈಸೇಷನ್ ಮಾಡುವುದರ ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಸಲು ಸಿದ್ದತೆ ನಡೆಸಲಾಗಿದೆ.
ಪೊಲೀಸ್ ಸರ್ಪಗಾವಲು:
ಮತ ಏಣಿಕೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 170 ಪೊಲೀಸ್ ಸಿಬ್ಬಂದಿ, 100 ಹೋಂ ಗಾರ್ಡ್ಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ, ಡಿಸಿಪಿ ಅಡೂರ್ ಶ್ರೀನಿವಾಸುಲು, ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಭೇಟಿ ಪರಿಶೀಲನೆ ನಡೆಸಿದರು.



