ಜಿಲ್ಲಾ ಸುದ್ದಿದಾವಣಗೆರೆ

ರಾಜ್ಯದ ಹತ್ತು ಕಡೆ ಕಳ್ಳತನ ಮಾಡಿದ್ದ ಮೂವರು ಅಂತರ ರಾಜ್ಯ ಕಳ್ಳರು ಸಿಕ್ಕಿಬಿದ್ದಿದ್ದೇಗೆ…?

ದಾವಣಗೆರೆ: ಮೂವರು ಅಂತರ ರಾಜ್ಯ ಕಳ್ಳರನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳಿಂದ 22.92 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರದ ಸಚಿನ್ ರಾಜ್ ಮಾನೆ, ಸನ್ನಿ ಮಹೇಶ್ ಕುಮಾರ್ ತನೇಜ್ ಹಾಗೂ ಸಾಗರ್ ಕೋಳೆ ಸೆರೆ ಸಿಕ್ಕ ಕಳ್ಳರು. ಹರಿಹರ ಪಟ್ಟಣದಲ್ಲಿ ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ವೇಳೆ ಈ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.

ನಿಪ್ಪಾಣಿ, ಸಂಕೇಶ್ವರ, ದಾವಣಗೆರೆ ಜಿಲ್ಲೆಯ ಹರಿಹರ, ಹಾವೇರಿ, ಖಾನಾಪುರ, ರಾಣೇಬೆನ್ನೂರು, ಖಾನಾಪುರ ಸೇರಿದಂತೆ ಸುಮಾರು 10 ಕಡೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳಿಂದ 16.84 ಲಕ್ಷ ರೂ. ಮೌಲ್ಯದ 421 ಗ್ರಾಂ ಚಿನ್ನಾಭರಣ, 2.16 ಲಕ್ಷ ರೂಪಾಯಿ ಮೌಲ್ಯದ 3600 ಗ್ರಾಂ ಬೆಳ್ಳಿ, 1 ಲಕ್ಷ ರೂಪಾಯಿ ನಗದು, ಏಳು ಲಕ್ಷ ರೂಪಾಯಿ ಮೌಲ್ಯದ ಫಾಸಿಲ್ ಕಂಪೆನಿಯ ವಾಚ್ ಹಾಗೂ 2.85 ಲಕ್ಷ ರೂಪಾಯಿ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷದ ಡಿಸೆಂಬರ್ 12 ರಂದು ರಾತ್ರಿ ಹರಿಹರ ನಗರದ ಕುರುಬರ ಬೀದಿಯಲ್ಲಿರುವ ಅಶೋಕ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಆರು ಲಕ್ಷ ರೂಪಾಯಿ ನಗದು, 40 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ದೊಡ್ಡಿಬೀದಿಯ ಬೀರೇಶ್ ಅವರ ಮನೆಯಲ್ಲಿ ಇದೇ ವೇಳೆ 39 ಸಾವಿರ ರೂಪಾಯಿ ಮೌಲ್ಯದ ಸ್ವತ್ತು ಕಳುವಾಗಿತ್ತು. ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಒಂದೇ ದಿನ ಎರಡೂ ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ರಾಜ್ಯದಲ್ಲಿ ಮೊದಲ ಬಾರಿಗೆ ಸಿಕ್ಕಿ ಬಿದ್ದ ಕಳ್ಳರು…!

ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಖದೀಮರು ಎಲ್ಲಿಯೂ ಸಿಕ್ಕಿ ಬಿದ್ದಿರಲಿಲ್ಲ. ಒಂದು ಜಿಲ್ಲೆಯಲ್ಲಿ ಕಳ್ಳತನ ಮಾಡಿದರೆ ಮತ್ತೆ ಅಲ್ಲಿಗೆ ಹೋಗುತ್ತಿರಲಿಲ್ಲ. ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದರು. ಹಾಗಾಗಿ, ಇವರು ಎಲ್ಲಿಯೂ ರಾಜ್ಯದಲ್ಲಿ ಸಿಕ್ಕಿ ಬಿದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಹರಿಹರ ಪೊಲೀಸರ ಚಾಕಚಕ್ಯತೆಯಿಂದ ಖದೀಮರು ರಾಜ್ಯದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಎಸ್ಪಿ ಸಿ. ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಹಿನ್ನೆಲೆ ಏನು…?

ಮೂರನೇ ತರಗತಿ ಅಷ್ಟೇ ಓದಿದ್ದ ಸಚಿನ್ ರಾಜು ಮಾನೆಗೆ ತಂದೆ ತಾಯಿಯಿರಲಿಲ್ಲ, ಅನಾಥನಾಗಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನ ಮಾಡುತ್ತಿದ್ದ. ಮಹಾರಾಷ್ಟ್ರದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು ರಿಮ್ಯಾಂಡ್ ಹೋಂಗೆ ಕಳುಹಿಸಿಕೊಟ್ಟಿದ್ದರು. ಆರಂಭದಲ್ಲಿ ಆಹಾರ ಕಳ್ಳತನ ಮಾಡುತ್ತಿದ್ದ ಈತ ಕ್ರಮೇಣ ಮನೆ ಕಳ್ಳತನ ಮಾಡಲು ಶುರು ಮಾಡಿದ. ಈತ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದರೂ, ಕಳವು ಮಾಡಿರುವುದನ್ನು ಬಿಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಹತ್ತನೇ ತರಗತಿಯವರೆಗೆ ಓದಿದ್ದ ಸನ್ನಿ ಮಹೇಶ್ ಕುಮಾರ್ ತನೇಜ್ ಹಾಗೂ ಏಳನೇ ತರಗತಿಯವರೆಗೆ ಓದಿದ್ದ ಸಾಗರ್ ಕೋಳೆ ವಿರುದ್ಧ ಮಹಾರಾಷ್ಟ್ರದಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಚಿನ್ ಈ ಕಳ್ಳರ ತಂಡದ ನಾಯಕನಾಗಿದ್ದು, ತಾಲೂಕು ಕೇಂದ್ರವನ್ನೇ ಆಯ್ಕೆಮಾಡಿಕೊಂಡು ಕಳ್ಳತನಕ್ಕಿಳಿಯುತ್ತಿದ್ದರು. ಸನ್ನಿ ತನೇಜ್ ಮೊಬೈಲ್ ನಲ್ಲಿ ಎಕ್ಸ್ ಪರ್ಟ್ ಆಗಿದ್ದು, ಈತ ಮೊಬೈಲ್ ಮೂಲಕ ಲೋಕೇಶನ್ ಹುಡುಕಿಕೊಟ್ಟು ತಾಂತ್ರಿಕ ನೆರವು ನೀಡುತ್ತಿದ್ದ ಎಂದು ಮಾಹಿತಿ ಸಿಕ್ಕಿದೆ.

ಇನ್ನು ಮಹಾರಾಷ್ಟ್ರದ ಪುಣೆಯ ಆಭರಣ ಅಂಗಡಿಯೊಂದಕ್ಕೆ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಆರೋಪಿಗಳು ಶೋಕಿ ಮಾಡುತ್ತಿದ್ದರು. ಮದ್ಯ, ಗಾಂಜಾ ಸೇವನೆಯನ್ನೂ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಎಸ್ ಪಿ ರಾಮಗೊಂಡ ಬಸರಗಿ, ಎಎಸ್ಪಿ ಕನ್ನಿಕಾ ಸಕ್ರಿವಾಲ್, ಡಿವೈಎಸ್ಪಿ ಬಸವರಾಜ್, ರುದ್ರೇಶ್ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಸತೀಶ್ ಕುಮಾರ್, ಪಿಎಸ್ಐಗಳಾದ ಸುನೀಲ್ ಬಿ. ತೇಲಿ, ಲತಾ ವಿ. ತಾಳೇಕರ್, ಮಂಜುನಾಥ್ ಕಲ್ಲೇದೇವರು, ಎಎಸ್ಐ ಯಾಸೀನ್ ಉಲ್ಲಾ, ನಾಗರಾಜ್ ಸುಣಗಾರ, ಹನುಮಂತ ಗೋಪಾಳ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button