ಹೊನ್ನಾವರ : ಅನ್ಯ ರಾಜ್ಯಕ್ಕೆ ಅಕ್ರಮವಾಗಿ ಕಲ್ಲು ಸಾಗಿಸುವ ಲಾರಿಗಳನ್ನು ತಡೆ ಹಿಡಿದ ಸ್ಥಳೀಯರು

ಕಾರವಾರ : ಯಾವುದೇ ಪರವಾನಿಗೆ ಇಲ್ಲದೇ ನೆರೆಯ ರಾಜ್ಯಕ್ಕೆ ಹತ್ತಾರು ಲಾರಿಗಳ ಮೂಲಕ ಕಲ್ಲು ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಲಾರಿಗಳನ್ನು ತಡೆದು ಕದ್ದು ಮುಚ್ಚಿ ನಡೆಯುತ್ತಿರುವ ಗಣಿ ಮಾಫಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡಿ ಜಾಗದಿಂದ ಯಾವುದೇ ಪರವಾನಿಗೆ ಇಲ್ಲದೇ ಕಲ್ಲು ಸಾಗಣೆ ಮಾಡುತ್ತಿದ್ದ ಎರಡು ಬೃಹತ್ ಲಾರಿಗಳನ್ನು ತಡೆದು, ಸ್ಥಳೀಯರು ವಿಚಾರಿಸಿದ್ದಾರೆ. ಈ ವೇಳೆ ಚಾಲಕರು ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ನೆರೆಯ ಆಂಧ್ರಪ್ರದೇಶಕ್ಕೆ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಇದನ್ನು ಸಿಮೆಂಟ್ ಹಾಗೂ ಬಾಕ್ಸೈಟ್ ಬಳಸುವ ಉದ್ದೇಶದಿಂದ ಕೊಂಡ್ಯೊಯಲಾಗುತ್ತಿತ್ತು ಎನ್ನಲಾಗಿದೆ.
ಹಾಡಿ ಎಂಬ ಪ್ರದೇಶದಲ್ಲಿ ಕಲ್ಲು ತೆಗೆಯಲಾಗಿದ್ದು,ಇಲ್ಲಿ ಕಲ್ಲು ಅಥವಾ ಮಣ್ಣನ್ನು ಹೊರಗಡೆ ಸಾಗಿಸಲು ಅನುಮತಿ ಇಲ್ಲ. ಆದ್ಯಾಗೂ ಸ್ಥಳೀಯರು ಹೇಳುವಂತೆ ಗಣಿ ಉದ್ದೇಶಕ್ಕೆ ಈ ಪ್ರದೇಶದಲ್ಲಿ ಕಲ್ಲುಗಳನ್ನು ಭಾರಿ ಗಾತ್ರದ ವಾಹನದಲ್ಲಿ ನಿತ್ಯ 10 ಕ್ಕೂ ಹೆಚ್ಚು ಲಾರಿಯಲ್ಲಿ ಕಳೆದ ಕೆಲ ದಿನಗಳಿಂದ ಸಾಗಿಸಲಾಗುತ್ತಿದೆ.ಯಾವುದೇ ಪರವಾನಿಗೆ ಇಲ್ಲದೇ ಕಲ್ಲು ಗಣಿ ಮಾಫಿಯಾ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ಡಿಎಫ್‌ಓ ಕೆ.ಗಣಪತಿ, ಎಸಿಎಫ್ ಕೆ.ಟಿ.ಬೋರಯ್ಯ, ಪಿಎಸ್ಐ ಶಶಿಕುಮಾರ್, ಅರಣ್ಯ,ಪೊಲೀಸ್, ಗಣಿ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




