ಪತಿಯ ಕತ್ತು ಹಿಸುಕಿ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಬಂಧನ

ದಾವಣಗೆರೆ: ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರ ಪೊಲೀಸರ ಬಲೆಗೆ ಬಿದ್ದ ಘಟನೆ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ಪುಷ್ಪಾ ಅಲಿಯಾಸ್ ಕುಸುಮಾ, ಆಕೆಯ ಪ್ರಿಯಕರ ಪ್ರಭು ಲಿಂಗಪ್ಪ ಬಂಧಿತ ಆರೋಪಿಗಳು. ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಲೋಕೇಶಪ್ಪ ಹತ್ಯೆಗೀಡಾದ ದುರ್ದೈವಿ.
ಘಟನೆ ಹಿನ್ನೆಲೆ ಏನು…?
ಪುಷ್ಪಾ ಕಳೆದ ಕೆಲ ವರ್ಷಗಳ ಹಿಂದೆ ಲೋಕೇಶಪ್ಪ ಎಂಬಾತನ ಜೊತೆ ವಿವಾಹವಾಗಿದ್ದಳು. ಆರಂಭದಲ್ಲಿ ಚೆನ್ನಾಗಿದ್ದ ವೈವಾಹಿಕ ಜೀವನ ಹದಗೆಟ್ಟಿತ್ತು. ಆಗಾಗ್ಗೆ ಜಗಳವಾಗುತಿತ್ತು. ಈ ವೇಳೆಯಲ್ಲಿ ಪರಿಚಯ ಆದವನೇ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಪ್ರಭುಲಿಂಗಪ್ಪ. ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಇದು ಪುಷ್ಪಾ ಪತಿಗೆ ಗೊತ್ತಾಗಿದ್ದು ಜಗಳವೂ ಆಗಿತ್ತು.
ಕಳೆದ 27ರಂದು ಪುಷ್ಪಾ ಹಾಗೂ ಪ್ರಭುಲಿಂಗಪ್ಪ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನ ಕತ್ತು ಹಿಸುಕಿ ಕೊಂದು ಹಾಕಿದ್ದರು. ಬಳಿಕ ಚನ್ನಗಿರಿ ಪೊಲೀಸರು ಪುಷ್ಪಾಳ ವಿಚಾರಣೆ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ.
ಪತಿಯನ್ನು ಕೊಂದ ಬಳಿಕ ಪುಷ್ಪಾ ನಾಟಕ ಮಾಡಿದ್ದಾಳೆ. ತನಗೇನೂ ಗೊತ್ತಿಲ್ಲದಂತೆ ವರ್ತಿಸಿದ್ದಾಳೆ. ಲೋಕೇಶಪ್ಪನ ಸಂಬಂಧಿಕರು ಪೊಲೀಸರಿಗೆ ಆಕೆ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ಕೊಟ್ಟಿದ್ದರು. ಬಳಿಕ ಆಕೆಯನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ.




