ಪೊಲೀಸ್ ಬಿಗಿ ಭದ್ರತೆಯಲ್ಲಿ ಬಂದು ಪತ್ನಿಗೆ ಜಿಪಿಎ ನೀಡಿದ ಮಾಜಿ ಸಚಿವ ವಿನಯ ಕುಲಕರ್ಣಿ

ಧಾರವಾಡ: ಬಿಜೆಪಿ ಮುಖಂಡ ಯೋಗೇಶಗೌಡ್ ಗೌಡರ ಕೊಲೆ ಪ್ರಕರಣದಲ್ಲಿ, ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಇಂದು ಧಾರವಾಡಕ್ಕೆ ಕರೆದುಕೊಂಡು ಬರಲಾಯಿತು. ಬೆಳಗಾವಿ ಹಿಂಡಲಗಾ ಜೈಲಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರವಾಡ ಮನಿ ವಿಧಾನ ಸೌಧದಕ್ಕೆ ಕರೆದುಕೊಂಡು ಬಂದು, ಕೆಲವು ಪತ್ರಗಳಿಗೆ ಸಹಿ ಮಾಡಿದ ನಂತರ ಮತ್ತೆ ಅವರನ್ನು ಬೆಳಗಾವಿ ಜೈಲಿಗೆ ಕರೆದುಕೊಂಡು ಹೋಗಲಾಗಿದೆ.
ವಿನಯ ಡೈರಿ ವ್ಯವಹಾರ ಸೇರಿದಂತೆ ಕುಟುಂಬದ ವ್ಯವಹಾರದ ಕುರಿತು, ಪತ್ನಿ ಶಿವಲೀಲಾ ಕುಲಕರ್ಣಿಯವರಿಗೆ ಜಿಪಿಎ ನೀಡುಲು ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿಯವರು ಅನುಮತಿ ಪಡೆದುಕೊಂಡಿದ್ದರು. ಧಾರವಾಡ ಮಿನಿ ವಿಧಾನಸೌಧದಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು.
ಇನ್ನೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರವಾಡ ಮಿನಿ ವಿಧಾನಸೌಧ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ ಮಾಜಿ ಸಚಿವ ವಿನಯವರು, ತಮ್ಮ ಪತ್ನಿ ಶಿವಲೀಲಾ ಕುಲಕರ್ಣಿಯವರಿಗೆ ಜಿಪಿಎ ನೀಡುವ ಪತ್ರಗಳನ್ನು ಓದಿ ನಂತರ ತಮ್ಮ ಸಹಿ ಮಾಡಿದರು. ಬಳಿಕ ಪತ್ನಿ ಶಿವಲೀಲಾ ಮಗಳು ಹಾಗೂ ಮಗನ ಜೊತೆಗೆ ಮತನಾಡಿ ಹೊರಬಂದ ವಿನಯ ಕುಲಕರ್ಣಿಯವರು, ತಮ್ಮ ಅಭಿಮಾನಿಗಳ ಕಡೆಗೆ ಕೈ ಮುಗಿಯುತ್ತಲ್ಲೇ ಪೊಲೀಸ್ ವಾಹನ ಏರಿದರು.
ಧಾರವಾಡ ಮಿನಿ ವಿಧಾನಸೌಧಕ್ಕೆ ವಿನಯ ಕುಲಕರ್ಣಿ ಆಗಮಿಸುವ ಸುದ್ದಿ ತಿಳಿದು, ನೂರಾರು ಅಭಿಮಾನಿಗಳು ಮಿನಿ ವಿಧಾನಸೌಧದ ಕಡೆ ಮುಖ ಮಾಡಿದರು. ಇನ್ನೂ ಕೆಲವರು ಪೊಲೀಸ ಕಣ್ಣು ತಪ್ಪಿಸಿ ಮನಿ ವಿಧಾನ ಸೌಧದ ಒಳಗಡೆ ಪ್ರವೇಶ ಮಾಡಿದ್ದು, ಅವರನ್ನು ಹೊರ ಹಾಕಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು.




