ಲಕ್ಷ್ಮಣ ಸವದಿ ಪರ ಶ್ರೀ ಕಲ್ಲಿನಾಥ ಮಹಾಸ್ವಾಮೀಜಿ ಬ್ಯಾಟಿಂಗ್; ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಾಯ

ಹುಬ್ಬಳ್ಳಿ: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಗಾಣಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಕೂಡಲೇ ಬೊಮ್ಮಾಯಿವರು ತಮ್ಮ ಸಂಪುಟದಲ್ಲಿ ಲಕ್ಷ್ಮಣ್ ಸವದಿಯರನ್ನು ಸೇರಿಸಿಕೊಳ್ಳಬೇಕು. ಗಾಣಿಗ ಸಮುದಾಯದ ಪ್ರಭಾವಿ ಮುಖಂಡರಾಗಿ ಲಕ್ಷ್ಮಣ ಸವದಿಯವರು ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬರುವ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅನ್ಯಾಯವನ್ನು ಸರಿಪಡಿಸಬೇಕು ಎಂದು ವಿಜಯಪುರದ ದಿಗಂಬರೇಶ್ವರ ಸಂಸ್ಥಾನ ಮಠದ ಶ್ರೀ ಕಲ್ಲಿನಾಥ ಮಹಾಸ್ವಾಮೀಜಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 85 ಲಕ್ಷಕ್ಕೂ ಅಧಿಕ ಗಾಣಿಗ ಸಮೂದಾಯದ ಜನರಿದ್ದು, ಇವರೆಲ್ಲರ ಆರ್ಶೀವಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಿಟ್ಟಿನಲ್ಲಿಯೇ ಈ ಹಿಂದಿನ ಸಿಎಂ ಆಗಿದ್ದ ಬಿಎಸ್‌ವೈ ಅವರು ನಮ್ಮ ಸಮೂದಾಯಕ್ಕೆ ಮನ್ನಣೆ ನೀಡಿ ಲಕ್ಷ್ಮಣ ಸವದಿ ಅವರನ್ನು ತಮ್ಮ ಸಂಪುಟದಲ್ಲಿ ಸಾರಿಗೆ ಸಚಿವರು ಸ್ಥಾನ ಹಾಗೂ ಉಪಮುಖ್ಯಮಂತ್ರಿಗಳಾಗಿ ಮಾಡಿದರು. ಆದರೆ ಸದ್ಯದ ಸಿಎಂ ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಬೇಸರ ವ್ಯಕ್ತಪಡಿಸಿದರು.
ಬೊಮ್ಮಾಯಿ ಸಚಿವ ಸಂಪುಟದಲ್ಲಿ ಗಾಣಿಗ ಸಮುದಾಯ ನಿರ್ಲಕ್ಷ್ಯ ಮಾಡಿರುವುದನ್ನು ಸಮೂದಾಯ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸಮೂದಾಯದ ಮುಖಂಡರಿಗೆ ಸ್ಥಾನಮಾನ ನೀಡಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ಸಮೂದಾಯದ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆಂದು ಎಂದು ಎಚ್ಚರಿಕೆ ನೀಡಿದರು.
ಇನ್ನು, 2023 ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರಂ ನೀಡಬೇಕು. ಜಮಖಂಡಿ ಕ್ಷೇತ್ರದಿಂದ ಆನಂದ ನ್ಯಾಮಗೌಡ, ಭದ್ರಾವತಿ ಕ್ಷೇತ್ರದಿಂದ ಸಂಗಮೇಶ ಟಿಕೆಟ್ ನೀಡಬೇಕೆಂದು ಇದೇ ವೇಳೆ ಒತ್ತಾಯ ಮಾಡಿದರು.




