ಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣ; ಎರಡು ವರ್ಷ ಕಳೆದರೂ ಸಿಗದ ಪುರಾವೆಗಳು

ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ನಡೆದು ಈಗ ಎರಡು ವರ್ಷಗಳೇ ಆಗುತ್ತಿದ್ದು, ಒಂದೇ ಒಂದು ಸಾಕ್ಷಿ, ಪುರಾವೆಗಳೂ ಸಿಕ್ಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ತಾತ್ಕಾಲಿಕವಾಗಿ ಖುಲಾಸೆ ಮಾಡಲು ರೈಲ್ವೆ ಪೊಲೀಸರು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಹುಬ್ನಳ್ಳಿ ರೈಲ್ವೆ ಪೊಲೀಸರು ಹುಬ್ಬಳ್ಳಿಯ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಸಿ ರಿಪೋರ್ಟ್’ ಸಲ್ಲಿಸಿದ್ದಾರೆ. ಕಳೆದ 2019ರ ಅಕ್ಟೋಬರ್ 21ರಂದು ಹುಬ್ಬಳ್ಳಿ- ವಿಜಯವಾಡ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಬೋಗಿಯಲ್ಲಿ 8 ನಾಡ ಬಾಂಬ್‌ಗಳಿದ್ದ ಬಕೆಟ್ ಪತ್ತೆಯಾಗಿತ್ತು. ಇದರಲಿದ್ದ ಒಂದು ಬಾಂಬ್ ಸ್ಪೋಟಗೊಂಡ ಪರಿಣಾಮ ಚಹಾ ಮಾರುವ ಕಾರ್ಮಿಕ ಹುಸೇನಸಾಬ ನಾಯಕವಾಲೆ ಎಂಬಾತನ ಬಲಗೈ ಛಿದ್ರಗೊಂಡಿತ್ತು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಫೋಟಗೊಂಡ ಸ್ಥಳಕ್ಕೆ ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ, ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಅನೇಕ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದರು. ಆದರೆ ತನಿಖೆ ಕೈಗೊಂಡ ರೈಲ್ವೆ ಪೊಲೀಸರಿಗೆ ಯಾವುದೇ ಸಾಕ್ಷಿ, ಪುರಾವೆ ಸಿಕ್ಕಿಲ್ಲ. ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದಾರೆ.

ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲು ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಎಲ್ಲ ಪ್ರಯಾಣಿಕರು ಇಳಿದ ಬಳಿಕ ಸ್ವಚ್ಛತಾ ಕಾರ್ಮಿಕನೊಬ್ಬನಿಗೆ 8 ಲಿಂಬೆಹಣ್ಣಿನ ಗಾತ್ರದ ಕಚ್ಚಾ ಬಾಂಬ್‌ಗಳಿದ್ದ ಬಕೆಟ್ ಸಿಕ್ಕಿತ್ತು. ಅದರ ಮೇಲೆ ‘ಪ್ರಕಾಶ ಅಭಿತ್ಕರ್, ಕೊಲ್ಲಾಪುರ ಎಂಎಲ್‌ಎ, ಗುರಗೋಟಿ, ‘ನೋ ಬಿಜೆಪಿ ನೋ ಆರ್‌ಎಸ್‌ಎಸ್. ಓನ್ಲಿ ಶಿವಸೇನಾ’ ಎಂದು ಬರೆಯಲಾಗಿತ್ತು. ಸಂಶಯಾಸ್ಪದ ಬಕೆಟ್ ಕಂಡ ಕೂಡಲೇ ಕಾರ್ಮಿಕ ಸ್ಥಳದಲ್ಲಿದ್ದ ಆರ್‌ಪಿಎಫ್ ಪೇದೆ ರವಿ ರಾಠೋಡಗೆ ಮಾಹಿತಿ ನೀಡಿದ್ದರು. ಆ ಬಕೆಟ್ ತೆಗೆದುಕೊಂಡು ಬಂದ ರವಿ ಸ್ಟೇಶನ್ ಮಾಸ್ಟರ್‌ಗೆ ವಿಷಯ ತಿಳಿಸಿದ್ದರು. ಬಳಿಕ ಕುತೂಹಲ ತಡೆಯಲಾರದೇ ಚಹಾ ಮಾರುವ ಹುಸೇನಸಾಬನನ್ನು ರೈಲ್ವೆ ಪೊಲೀಸರು, ಅದನ್ನು ಒಡೆದು ಪರೀಕ್ಷಿಸುವಂತೆ ಸೂಚಿಸಿದ್ದರು. ಆತ ಕೈಯಲ್ಲಿ ಹಿಡಿದು ನೆಲಕ್ಕೆ ಹೊಡೆದ ಕೂಡಲೇ ಬಾಂಬ್ ಸ್ಪೋಟಗೊಂಡು ಆತನ ಕೈ ಛಿದ್ರಗೊಂಡಿತ್ತು.

ಘಟನೆಯ ನಂತರ ಐದು ದಿನಗಳ ಬಳಿಕ ಬೆಂಗಳೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ದಳ ನಿರ್ಜನ ಪ್ರದೇಶದಲ್ಲಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಿತ್ತು. ಆದರೆ ಪ್ರಕರಣ ನಡೆದು ಎರಡು ವರ್ಷಗಳಾದರೂ ಕೂಡ ಇನ್ನೂ ಆರೋಪಿಗಳು ಪತ್ತೆಯಾಗದೇ ಇರುವುದು ಈಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Spread the love

Related Articles

Leave a Reply

Your email address will not be published. Required fields are marked *

Back to top button