ಚಿಕ್ಕಮಗಳೂರು: ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ

ಚಿಕ್ಕಮಗಳೂರು: ಮೈಸೂರಲ್ಲಿ ದೇಗುಲ ನೆಲಸಮ ಮಾಡಿದ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಸಂಸದರನ್ನು ರಸ್ತೆಯಲ್ಲಿ ತಡೆದು ಹಿಂದೂಪರ ಸಂಘಟನೆ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೂಡಿಗೆರೆಯಲ್ಲಿ ಗುರುವಾರ ನಡೆಯಿತು.
ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಇಬ್ಬರೂ ಮೂಡಿಗೆರೆಯಲ್ಲಿ ಕಾರಿನಿಂದ ಇಳಿದು ಬರುತ್ತಿದ್ದಂತೆ ಏಕಾಏಕಿ ಅಲ್ಲಿ ಜಮಾಯಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಇದರಿಂದ ಇಬ್ಬರು ಸಂಸದರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಪೊಲೀಸರೂ ಕೆಲಕಾಲ ತಬ್ಬಿಬ್ಬಾದರು.
ದೇಗುಲ ನೆಲಸಮ ಮಾಡಿದ ಘಟನೆಗೆ ವಿರೋಧ ವ್ಯಕ್ತಪಡಿಸಿ, ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದ ಕಾರ್ಯಕರ್ತರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ದೇವಾಲಯಗಳನ್ನು ಕೆಡವಿರುವುದು ಖಂಡನೀಯ ಎಂದರು.
ದೇಗುಲ ಸಂರಕ್ಷಣೆಗೆ ಸಿಎಂ ಆದೇಶ ಹೊರಡಿಸಲಿದ್ದಾರೆ: ಪ್ರತಾಪ ಸಿಂಹ
ಹಿಂದೂ ದೇಗುಲಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸದ್ಯದಲ್ಲೇ ಸ್ಪಷ್ಟ ಆದೇಶ ಹೊರಡಿಸಲಿದ್ದಾರೆ. ಪೂಜಾಸ್ಥಳಗಳ ತೆರವು ಕಾರ್ಯಾಚರಣೆ ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳಿಗೆ ಅವಕಾಶ ಆಗದಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಕಳೆದ 2018ರ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾಳೆ ಮೈಸೂರಿನಲ್ಲಿ ಹೇಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ್ ತಿಳಿಸಿದರು.
ದೇಗುಲಗಳನ್ನು ಏಕಾಏಕಿ ತೆರವು ಮಾಡಿದ್ದರಿಂದ ಸಾಕಷ್ಟು ಸಂಖ್ಯೆಯ ಭಕ್ತಾದಿಗಳ ಮನಸಿಗೆ ನೋವಾಗಿದೆ. ಪ್ರತಿಭಟನೆ ರೂಪದಲ್ಲಿ ಅದು ವ್ಯಕ್ತವಾಗಿದೆ. ಜನರ ಭಾವನೆಗೆ ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಿದರು
ಬೆಲೆ ಏರಿಕೆ ಸಂಬಂಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಲಿ, ಅವರು ಹಾಗೆ ಮಾತನಾಡುತ್ತಲೇ ಇರಬೇಕು ಎಂದು ವ್ಯಂಗ್ಯವಾಡಿದ ಅವರು, ದೇಶದ ಪರಿಸ್ಥಿತಿ ಜನರಿಗೆ ಅರ್ಥವಾಗಿದೆ. ಪ್ರಧಾನಿ ಬಗ್ಗೆ ಜನತೆಗೆ ವಿಶ್ವಾಸವಿದೆ. ಇತ್ತೀಚೆಗೆ ನಡೆದ ನಗರಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದರು.




