ಹಲಾಲ್ ವಿವಾದದ ನಡುವೆ ಅಕ್ರಮ ಕಸಾಯಿಖಾನೆ ಬಯಲಿಗೆಳೆದ ಪೊಲೀಸರು

ಕಲಬುರಗಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿ ಹಲವು ದಿನಗಳು ಕಳೆದರು ಸಹ, ಇನ್ನು ಗೋಹತ್ಯೆ ನಿಷೇಧ ಸಂಪೂರ್ಣವಾಗಿ ನಿಂತಿಲ್ಲ. ಅಷ್ಟಕ್ಕೂ ರಾಜ್ಯಾದ್ಯಂತ ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಅಭಿಯಾನ ನಿರಂತರವಾಗಿ ನಡೆಯುತ್ತಿರುವ ಬೆನ್ನಲ್ಲೆ, ಇದೀಗ ಕಲಬುರಗಿಯಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ದೂರಿನ ಮೇರೆಗೆ ಕಸಾಯಿಖಾನೆಗಳ ಮೇಲೆ ಪೊಲೀಸರು ಸಮರ ಸಾರಿದ್ದಾರೆ.
ನಗರದ ಮೋಮಿನಪುರ ಮತ್ತು ರೋಜಾ ಬಡಾವಣೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದ ಅಡ್ಡೆಗಳ ಮೇಲೆ ಇಂದು ನೂರಕ್ಕೂ ಅಧಿಕ ಪೊಲೀಸರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿಗಳು, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಗೋಮಾಂಸ ಗೋವಿನ ಚರ್ಮ ಮತ್ತು ಗೋವಿನ ಹೊಟ್ಟೆಯಲ್ಲಿನ ವಿವಿಧ ಅಂಗಗಳನ್ನ ಜಪ್ತಿ ಮಾಡಿದ್ದಾರೆ. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಕೇಶವ ಮೋಟಗಿ ನೀಡಿದ ದೂರಿನ ಅನ್ವಯ ಪೊಲೀಸರು ದಾಳಿ ನಡೆಸಿ ಗೋಮಾಂಸ ಸೀಜ್ ಮಾಡುವುದರ ಜೊತೆಗೆ 9 ಜೀವಂತ ಗೋವುಗಳನ್ನ ರಕ್ಷಣೆ ಮಾಡಿದ್ದಾರೆ..
ಇನ್ನೂ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳನ್ನ ಸಂಪೂರ್ಣವಾಗಿ ಮುಚ್ಚಬೇಕೆಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಹೈಕೋರ್ಟ್ ಪೀಠದ ನಿರ್ದೇಶನದಂತೆ ಕಸಾಯಿಖಾನೆ ಮಾಲೀಕರು ಸಹ ನಮ್ಮ ಕಾರ್ಯಕ್ಕೆ ಸಾಥ್ ನೀಡಿದ್ದಾರೆ ಅಂತಾ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ್ ಹೇಳಿದ್ದಾರೆ. ಈ ಕುರಿತು ಕಲಬುರಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೂ ಮೋಮಿನಪುರ ಮತ್ತು ರೋಜಾ ಏರಿಯಾದಲ್ಲಿ ಹಲವು ಕಸಾಯಿಖಾನೆಗಳ ಮೇಲೆ ಈಗಾಗಲೇ ಪಾಲಿಕೆ ಅಧಿಕಾರಿಗಳು, ಪೊಲೀಸರು ಮತ್ತು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಎಷ್ಟು ಪ್ರಮಾಣದ ಗೋಮಾಂಸ ಪತ್ತೆಯಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಹಿತಿ ನೀಡುವುದಾಗಿ ಪಾಲಿಕೆ ಆಯುಕ್ತರು ಹೇಳಿದ್ದಾರೆ.
