ಕೊಡಗುಜಿಲ್ಲಾ ಸುದ್ದಿ

ಅತಿವೃಷ್ಟಿ ಬೆಳೆನಷ್ಟ ಪರಿಹಾರ ಸಂಪೂರ್ಣ ಪಾವತಿಗೆ ಕೊಡಗು ಬೆಳೆಗಾರರ ಒಕ್ಕೂಟ ಒತ್ತಾಯ

ಕೊಡಗು : ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಠಿಗೆ ತುತ್ತಾಗಿ ಬೆಳೆನಷ್ಟಗೊಂಡ ಪ್ರಕರಣದಲ್ಲಿ ಪರಿಹಾರ ಹಣ ಬೆಳೆಗಾರರ ಖಾತೆಗೆ ಇನ್ನು ಸಂಪೂರ್ಣವಾಗಿ ಪಾವತಿಯಾಗಿಲ್ಲ. ಬಹಳಷ್ಟು ಬೆಳೆಗಾರರಿಗೆ ಭಾಗಶಃ ಪರಿಹಾರ ಹಣ ಬಂದಿದೆ. ಆದಷ್ಟು ಬೇಗ ಪೂರ್ತಿ ಪರಿಹಾರ ಹಣವನ್ನು ಪಾವತಿಸುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಒತ್ತಾಯಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು ಪ್ರಸಕ್ತ ವರ್ಷದ ಬೆಳೆ ನಷ್ಟ ಪರಿಹಾರ ಹಣ ಹೆಕ್ಟೇರ್‌ಗೆ 18 ಸಾವಿರದಂತೆ ಎರಡು ಹೆಕ್ಟೇರ್‌ಗೆ 36ಸಾವಿರ ಪಾವತಿಯಾಗಬೇಕು. ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ತಲಾ 10 ಸಾವಿರ ಘೋಷಿಸಿದ್ದು, ಪ್ರತಿ ಹೆಕ್ಟೇರ್‌ಗೆ 28ಸಾವಿರದಂತೆ ಗರಿಷ್ಟ ಎರಡು ಹೆಕ್ಟೇರ್ ಮಿತಿಗೆ 56 ಸಾವಿರ ಪಾವತಿಯಾಗಬೇಕು. ಆದರೆ, ಬಹಳಷ್ಟು ಪ್ರಕರಣದಲ್ಲಿ ಭಾಗಶಃ ಹಣವನ್ನು ಬೆಳೆಗಾರರ ಖಾತೆಗೆ ವರ್ಗಾಯಿಸಲಾಗಿದೆ.

ಇನ್ನು ಕೆಲವು ಬೆಳೆಗಾರರಿಗೆ ಮುಖ್ಯ ಮಂತ್ರಿ ಘೋಷಿಸಿದ ಹೆಚ್ಚುವರಿ ಪರಿಹಾರ ಹಣ ಪಾವತಿಯಾಗಿಲ್ಲದ್ದ ಬಗ್ಗೆ ಜಿಲ್ಲಾಧಿಕಾರಿ ಗಮನಿಸಬೇಕೆಂದು ಹೇಳಿದರು. ಕಂದಾಯ ಸಚಿವ ಆರ್. ಅಶೋಕ್ ಅವರು ಬೆಳೆ ನಷ್ಟದ ಪರಿಹಾರವನ್ನು ಜನವರಿಗೆ 15ರೊಳಗೆ ಪಾವತಿಸುವುದಾಗಿ ಹೇಳಿಕೆ ನೀಡಿದ್ದರು. ಆದರೂ, ಇನ್ನು ಸಂಪೂರ್ಣ ಹಣ ಪಾವತಿಯಾಗಿಲ್ಲ.

ಕಳೆದ ವರ್ಷವೂ ಸಹ ಅರ್ಹ ಬೆಳೆಗಾರರಿಗೆ ಪರಿಹಾರ ಹಣ ಪಾವತಿಯಾಗಿಲ್ಲ ಕಳೆದ ವರ್ಷದಂತೆ ಈ ವರ್ಷವೂ ಕಂದಾಯ ಇಲಾಖೆಯ ಲೋಪದೋಷ ಹಾಗೂ ನಿರ್ಲಕ್ಷ್ಯದಿಂದ ಬೆಳೆಗಾರರು ಪರಿಹಾರದಿಂದ ವಂಚಿತರಾಗದಂತೆ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು.

ರಸಗೊಬ್ಬರ ಬೆಲೆ ಮತ್ತೆ ಹೆಚ್ಚಾಗಿದ್ದು, ಇದು ಆತಂಕಕಾರಿಯಾಗಿದೆ. ರೈತರ ಆದಾಯ ಹೆಚ್ಚಾಗಿಲ್ಲ ಆದರೆ, ಉತ್ಪಾದನಾ ವೆಚ್ಚ ಬಹಳ ಹೆಚ್ಚಾಗಿದ್ದು, ಪೊಟ್ಯಾಶ್ ರಸಗೊಬ್ಬರದ ದರ 900 ರೂ.ಗಳಿಂದ 1700 ರೂ.ಗೆ ಏರಿಕೆಯಾಗಿರುವುದು ದೊಡ್ದ ಅನ್ಯಾಯವಾಗಿದ್ದು,ಸರಕಾರ ಹಳೆಯ ದರದಲ್ಲಿ ರಸಗೊಬ್ಬರ ಒದಗಿಸಬೇಕು. ಇಲ್ಲದಿದ್ದರೆ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಕೋವಿಡ್ 19 ಸಾಂಕ್ರಾಮಿಕ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಸದಸ್ಯರಿಗೆ ಸರ್ಕಾರ ರೂ. 1 ಲಕ್ಷ ಪರಿಹಾರ ಹಣ ನೀಡುವ ಘೋಷಣೆ ಮಾಡಿದ್ದು, ಬಹಳಷ್ಟು ಬಿಪಿಎಲ್ ಕುಟುಂಬಗಳಿಗೆ ಈ ಪರಿಹಾರ ಹಣ ದೊರೆತ್ತಿಲ್ಲ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರು ಪರಿಹಾರ ಹಣಕ್ಕಾಗಿ ಅಲೆದಾಡುವಂತಾಗದೇ ಅವರ ಮನೆಗೆ ಅಥವಾ ಖಾತೆಗೆ ನೇರವಾಗಿ ವರ್ಗಾಯಿಸುವ ಕ್ರಮ ಆಗಬೇಕೆಂದು ಒತ್ತಾಯಿಸಿದರು.

ರಸಗೊಬ್ಬರವನ್ನು ಜಿಎಸ್.ಟಿ ವ್ಯಾಪ್ತಿಗೆ ತರುತ್ತಿರುವುದು ಬೆಳೆಗಾರರಿಗೆ ಗೊಂದಲ ಉಂಟುಮಾಡಿದೆ. ಇದರಿಂದ ಸಣ್ಣ ರೈತರು ಹಾಗೂ ಬೆಳೆಗಾರರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಸರಕಾರ ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button