ಎತ್ತಿನಹೊಳೆ ಯೋಜನೆಯ ವಿನ್ಯಾಸ ಮಾರ್ಪಾಡು ವಿರುದ್ದ ಸಿಎಂಗೆ ಪತ್ರ ಬರೆದ ಕುಮಾರಸ್ವಾಮಿ

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅಂತ 2012 ರಲ್ಲಿ ಜಾರಿಗೆ ತಂದ ಎತ್ತಿನಹೊಳೆ ಯೋಜನೆ ಕಳೆದ 10 ವರ್ಷಗಳಿಗಳಿಂದ ಪೂರ್ಣಗೊಳ್ಳದೆ ಎತ್ತಿನಹೊಳೆ ಯೋಜನೆಯ ವಿನ್ಯಾಸವನ್ನು ಬದಲಾಯಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪಶ್ಚಿಮಘಟ್ಟಗಳಲ್ಲಿ ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರನ್ನು ಏತನೀರಾವರಿ ಮೂಲಕ ಬಯಲು ಸೀಮೆ ಜಿಲ್ಲೆಗಳ ಕೆರೆ ತುಂಬಿಸಲು ಜಾರಿಗೊಳಿಸಿರುವ ಯೋಜನೆ ಇದಾಗಿದ್ದು ಇದಕ್ಕೆ ಈವರೆವಿಗೂ 8500 ಕೋಟಿ ಹಣ ವ್ಯರ್ಥ ಮಾಡಲಾಗಿದೆ. ಆದರೆ ಯೋಜನೆ ಮಾತ್ರ ಯಾವುದೇ ರೀತಿಯ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ ಎತ್ತಿಹೊಳೆಯ ಯೋಜನೆಯ ಮೂಲಕ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಬಳಿ ಸುಮಾರು 5.78 ಟಿಎಂಸಿ ಸಾಮರ್ಥ್ಯದ ನೀರು ಶೇಖರಿಸಿ ಅಲ್ಲಿಂದ ಆ ನೀರನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವುದು ಅದರ ಪ್ರಮುಖ ಉದ್ದೇಶವಾಗಿತ್ತು.
ಆದರೆ ಜಲಾಶಯ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಹೆಚ್ಚಿನ ಖರ್ಚು ಬರುತ್ತದೆ ಎಂಬ ಉದ್ದೇಶದಿಂದ ೫.೭೮ ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯವನ್ನು ಕೇವಲ 2 ಟಿಎಂಸಿ ಸಾಮರ್ಥ್ಯದ ನೀರಿನ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದ್ದು ಆ ಎರಡು ಟಿಎಂಸಿ ನೀರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೂರೂ ಜಿಲ್ಲೆಗಳಿಗೆ ನೀರು ಲಭ್ಯವಾಗುವುದಿಲ್ಲ ಇದೊಂದು ಅರೆಕಾಸಿನ ಮಜ್ಜಿಗೆಯ ರೀತಿಯ ಯೋಜನೆಯಾಗಲಿದೆ ಎಂದು ಕುಟುಕಿದ್ದಾರೆ.
ಬೈರಗೊಂಡ್ಲು ಬಳಿಯ ಭೂಮಿ ಕಳೆದುಕೊಳ್ಳುವ ರೈತರಿಗೆ ವೈಜ್ಙಾನಿಕ ರೀತಿಯಲ್ಲಿ ಪರಿಹಾರ ನೀಡಿ ಭೂ ಸ್ವಾಧೀನ ಮಾಡಿಕೊಂಡು 5.78 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿ ಆ ಜಲಾಶಯದ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕ್ರ ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
