ಕನ್ನಡ ರಾಜ್ಯೋತ್ಸವ ನಿಮಿತ್ತ ಆಹಾರ ಮೇಳ : ಬಾಯಲ್ಲಿ ನೀರು ತರಿಸಿದ ಬಗೆ ಬಗೆಯ ಖಾದ್ಯ

ಕಾರವಾರ : ಕರ್ನಾಟಕ ರಾಜ್ಯೋತ್ಸವ ನಿಮಿತ್ತ “ಕನ್ನಡಕ್ಕಾಗಿ ನಾವು” ಅಭಿಯಾನದಲ್ಲಿ ಕಾರವಾರ ಪಟ್ಟಣದ ಹಿಂದೂ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಆಹಾರ ಮೇಳ ಹಾಗೂ ಕನ್ನಡ ನಾಡಿನ ವೇಷ ಭೂಷಣಗಳ, ಉಡುಗೆ ತೊಡುಗೆಗಳ ಪ್ರದರ್ಶನ ಗಮನ ಸೆಳೆಯಿತು.
ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ಹಾಗೂ ಶಿಕ್ಷಕರು ತಾವು ತಯಾರಿಸಿದ ಮತ್ತು ಮನೆಯಲ್ಲಿ ತಯಾರು ಮಾಡಿ ತಂದ ಕರಾವಳಿ,ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ವಿವಿಧ ಬಗೆಯ ಖಾದ್ಯಗಳನ್ನು ವಿಭಿನ್ನವಾಗಿ ಪ್ರದರ್ಶಿಸಿದರು. ಪ್ರಮುಖವಾಗಿ ಮೀನು ಹಾಗೂ ಚಿಕನ್ ಖಾದ್ಯಗಳು, ರಾಗಿ ಮುದ್ದೆ, ಜೋಳದ ರೊಟ್ಟಿ, ಕಾಳು ಪಲ್ಯ, ವಿವಿಧ ಬಗೆಯ ಸ್ವೀಟ್, ಉಪ್ಪಿನಕಾಯಿ, ಹೋಳಿಗೆ ತುಪ್ಪ, ಉಪ್ಪಿಟ್ಟು, ಕೇಸರಿ, ನೀರು ದೋಸೆ ಸೇರಿದಂತೆ 150 ಕ್ಕೂ ಹೆಚ್ಚಿನ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.
ಈ ವೇಳೆ ಕನ್ನಡ ನಾಡಿನ ಉಡುಗೆ ತೊಡುಗೆಗಗಳ ವೇಷಭೂಷಣ ಕೂಡ ಗಮನ ಸೆಳೆಯಿತು.ಉತ್ತರ ಕರ್ನಾಟಕ ಭಾಗದ ವಿವಿಧ ಶೈಲಿಯ ಉಡುಗೆಗಳನ್ನು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.
ಇನ್ನು ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಮಾತನಾಡಿ, ಹಿಂದಿನ ಕಾಲದ ಆಚಾರ ವಿಚಾರ ಉಡುಗೆ ತೊಡುಗೆಗಳು ಹಾಗೂ ಆಹಾರಗಳು ನಮಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ. ಇಂದು ಅದೆಲ್ಲವೂ ಮರೆಯಾಗುತ್ತಿದ್ದು,ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಈ ಕ್ರಮ ಶ್ಲಾಘನೀಯ ಎಂದು ಹೇಳಿದರು.
ಬಳಿಕ ಆಹಾರ ಮೇಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ಎನ್.ಎಸ್.ನರೋನಾ ಮೆಚ್ಚುಗೆ ವ್ಯಕ್ತಪಡಿಸಿದರು.ಮಾತ್ರವಲ್ಲದೇ ವಿದ್ಯಾರ್ಥಿಗಳು ತಂದ ಆಹಾರ ಪದಾರ್ಥಗಳ ಸವಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನರೇಂದ್ರ ದೇಸಾಯಿ, ಅರುಣ್ ರಾಣೆ, ಸುರೇಶ ಗಾಂವಕರ್, ಗಣೇಶ ಭೀಷ್ಠಣ್ಣನವರ ಉಪಸ್ಥಿತರಿದ್ದರು.




