ಉತ್ತರ ಕನ್ನಡಜಿಲ್ಲಾ ಸುದ್ದಿ

ಪ್ರವಾಹದಿಂದಾಗಿ ಹೂಳು ತುಂಬಿದ ಜಮೀನು ; ಬೆಳೆ ಬೆಳೆಯಲಾಗದೇ ಕಂಗೆಟ್ಟ ರೈತರು

ವರದಿ : ತೇಜಸ್ವಿ ಬಿ.ನಾಯ್ಕ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 23 ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದ 1700 ಹೆಕ್ಟೇರ್ ಗೂ ಹೆಚ್ಚು ಕೃಷಿ ಭೂಮಿಗೆ ಹಾನಿಯಾಗಿದೆ. ಅದರಲ್ಲೂ ಬಹುತೇಕ ಕಡೆ ಗದ್ದೆಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ರೈತರು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ಬಳಿಕ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಹಾನಿಯ ಜಂಟಿ ಸರ್ವೆ ಕಾರ್ಯ ಕೈಗೊಂಡಿದೆ. ಈವರೆಗಿನ ಲೆಕ್ಕಾಚಾರದ ಪ್ರಕಾರ 1700 ಹೆಕ್ಟೇರ್ ಕೃಷಿ ಭೂಮಿ ಮತ್ತು ಸುಮಾರು 600 ಹೆಕ್ಟೇರ್ ತೋಟಗಾರಿಕೆ ಭೂಮಿ ಹಾನಿಗೊಳಗಾಗಿದೆ. ಹಾನಿಗೊಳಗಾದ ಕೃಷಿ ಭೂಮಿಯ ಪೈಕಿ ಕೆಲವೆಡೆ ಪ್ರವಾಹದ ನೀರು ತುಂಬಿಕೊಂಡು ಬೆಳೆ ನಾಶವಾಗಿದೆ. 600.08 ಹೆಕ್ಟೇರ್ ಭೂಮಿಯಲ್ಲಿ ಪ್ರವಾಹದಿಂದ ಕೊಚ್ಚಿಕೊಂಡು ಬಂದ ಮಣ್ಣು ಮತ್ತು ಮರಳು ಭರ್ತಿಯಾಗಿದೆ. ಅದರಲ್ಲೂ ಕೆಲವೆಡೆ ಮೊಣಕಾಲವರೆಗೆ ಮಣ್ಣು ಭರ್ತಿಯಾಗಿದೆ.

ಕೇವಲ ಬೆಳೆ ಹಾನಿಯಾಗಿದ್ದಲ್ಲಿ ಮತ್ತೊಮ್ಮೆ ಬೆಳೆಯನ್ನಾದರೂ ಬೆಳೆಯಬಹುದು. ಆದರೆ ಮಣ್ಣು,ಮರಳು, ಕಟ್ಟಿಗೆ,ಕಸ ತುಂಬಿಕೊಂಡ ಭೂಮಿಯಲ್ಲಿ ಅವುಗಳನ್ನು ಸ್ವಚ್ಛಗೊಳಿಸದ ಹೊರತೂ ಬೆಳೆ ಬೆಳೆಯಲು ಕಷ್ಟ ಸಾಧ್ಯ. ಶೇಖರಣೆಯಾಗಿರುವ ಮಣ್ಣನ್ನು ಖಾಲಿ ಮಾಡಿ ಭೂಮಿಯನ್ನು ಮೊದಲಿನ ಸ್ಥಿತಿಗೆ ತರಲು ಅಪಾರ ವೆಚ್ಛ ತಗಲುತ್ತದೆ. ಮೊದಲೇ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹತಾಶರಾಗಿ ಕೈ ಚೆಲ್ಲಿ ಕುಳಿತಿರುವ ರೈತರಿಗೆ ಭವಿಷ್ಯವೇ ಮಸುಕಾಗಿದೆ.

ಸಂತ್ರಸ್ತರಿಗೆ ಅರೆಕಾಸಿನ ಮಜ್ಜಿಗೆ

ಬೆಳೆ ಹಾನಿಗೆ ಮತ್ತು ಮಣ್ಣು ತುಂಬಿಕೊಂಡಿರುವ ಕೃಷಿ ಭೂಮಿಗೆ ಸರಕಾರ ಪರಿಹಾರವೇನೋ ವಿತರಿಸುತ್ತದೆ. ಆದರೆ ಇದು ಬಡವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಒಂದು ಹೆಕ್ಟೇರ್ ಕೃಷಿ ಬೆಳೆಯ ಹಾನಿಗೆ ಎನ್‍ಡಿಆರ್​​ಎಫ್​​​​​​ ನಿಯಮಾವಳಿಯ ಪ್ರಕಾರ 6,800 ರೂ.ಪರಿಹಾರ ನಿಗದಿಪಡಿಸಲಾಗುತ್ತಿದೆ.

ಇನ್ನು ಕೃಷಿ ಭೂಮಿಯಲ್ಲಿ ಮಣ್ಣು,ಮರಳು ತುಂಬಿಕೊಂಡಿದ್ದರೆ ಒಂದು ಹೆಕ್ಟೇರ್​​​ಗೆ 12,200 ರೂ. ಪರಿಹಾರ ಕೊಡಲಾಗುತ್ತದೆ. ಇಂದಿನ ಹೆಚ್ಚಿನ ಕೂಲಿ ದರದಲ್ಲಿ ಈ ಪರಿಹಾರ ಯಾತಕ್ಕೂ ಸಾಲುವುದಿಲ್ಲ ಎಂಬುದು ರೈತರ ಅಳಲಾಗಿದೆ.

ಒಂದು ಹೆಕ್ಟೇರ್​ನಲ್ಲಿ ತುಂಬಿಕೊಂಡಿರುವ ಮಣ್ಣನ್ನು ತೆಗೆದು ಭೂಮಿಯನ್ನು ಹದಗೊಳಿಸಿ ಮೊದಲಿನ ಸ್ಥಿತಿಗೆ ತರಲು 50 ಸಾವಿರಕ್ಕೂ ಹೆಚ್ಚು ಖರ್ಚು ತಗಲುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ಸರಕಾರ ಕೇವಲ ನಾಮಕಾವಸ್ತೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುವಂತಾಗಬಾರದು. ರೈತರ ಬೆಳೆ ಹಾನಿ ಮತ್ತು ಭೂಮಿ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಬೇಕು. ಸ್ಥಳೀಯ ಕೂಲಿ ದರ, ಯಂತ್ರೋಪಕರಣಗಳು, ಬೀಜದ ವೆಚ್ಛವನ್ನೆಲ್ಲ ಸರಿಯಾಗಿ ಲೆಕ್ಕ ಹಾಕಿ ಪರಿಹಾರ ವಿತರಿಸಬೇಕು ಎಂದು ಬೆಳೆ ಹಾನಿಗೊಳಗಾದ ರೈತ ನೀಲಕಂಠ ನಾಯ್ಕ ಮತ್ತಿತರರು ಆಗ್ರಹಿಸಿದ್ದಾರೆ.

ಇನ್ನು ಎನ್‍ಡಿಆರ್​​ಎಫ್​​​ ನಿಯಮದ ಪ್ರಕಾರ ಕೃಷಿ ಬೆಳೆ ಹಾನಿಗೆ ಮತ್ತು ಭೂಮಿಯಲ್ಲಿ ಮಣ್ಣು ತುಂಬಿಕೊಂಡಿರುವುದಕ್ಕೆ ಪ್ರತ್ಯೇಕ ಪರಿಹಾರ ನಿಗದಿಪಡಿಸಲಾಗಿದೆ. ಇನ್ನು ಜಂಟಿ ಸರ್ವೆ ಚಾಲ್ತಿಯಲ್ಲಿದ್ದು, ಸರ್ವೆ ಮುಗಿದ ಮೇಲೆ ಒಟ್ಟೂ ಹಾನಿಗೊಳಗಾದ ಕೃಷಿ ಭೂಮಿಯ ಲೆಕ್ಕ ಸರಿಯಾಗಿ ಸಿಗಲಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಅವರು ತಿಳಿಸಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button