ಲಂಚ ಪಡೆಯುವಾಗ ಮೈಸೂರು ತಾಪಂ ಇಂಜಿನಿಯರ್, ಪಿಡಿಒ ಎಸಿಬಿ ಬಲೆಗೆ

ಮೈಸೂರು : ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ತಲಾ 4 ಸಾವಿರ ರೂ. ಲಂಚ ಸ್ವೀಕರಿಸುವಾಗ ತಾಲ್ಲೂಕು ಪಂಚಾಯಿತಿ ಇಂಜಿನಿಯರ್ ಹಾಗೂ ಪಿಡಿಒ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಅಂಜನ ಹಾಗೂ ಅಂಕನಹಳ್ಳಿ ಗ್ರಾಪಂನ ಪಿಡಿಒ ರಾಮಸ್ವಾಮಿ ಎಂಬವರೇ ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರು.
ಕೆ.ಆರ್.ನಗರ ಶಾಬಾಳು ಗ್ರಾಮದ ನಿವಾಸಿಯೊಬ್ಬರು ತಮ್ಮ 25 ಗುಂಟೆ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದರು. ಈ ಸಂಬಂಧ ಸರ್ಕಾರದಿಂದ 86 ಸಾವಿರ ರೂ. ಅನುದಾನ ಬರಬೇಕಿತ್ತು. ಅನುದಾನ ಬಿಡುಗಡೆಗೆ ಇಂಜಿನಿಯರ್ ಅಂಜನ ಹಾಗೂ ಪಿಡಿಒ ರಾಮಸ್ವಾಮಿ ಅವರ ಸಹಿ ಅಗತ್ಯವಿತ್ತು. ಹೀಗಾಗಿ ಅವರು ಇಬ್ಬರನ್ನೂ ಭೇಟಿ ಮಾಡಿದ್ದರು. ಅವರೊಂದಿಗೆ ಮಾತುಕತೆ ನಡೆಸಿದ ಅಂಜನ ಹಾಗೂ ರಾಮಸ್ವಾಮಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 4 ಸಾವಿರ ರೂ. ಪಡೆಯಲು ಒಪ್ಪಿದ್ದರು.
ಈ ಸಂಬಂಧ ಜಮೀನು ಮಾಲೀಕರು ಎಸಿಬಿಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಪೊಲೀಸರು ಅಂಜನ ಹಾಗೂ ರಾಮಸ್ವಾಮಿ ಅವರು ಲಂಚ ಸ್ವೀಕರಿಸುವ ವೇಳೆ ಅವರ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಎಸಿಬಿ ಡಿವೈಎಸ್‌ಪಿ ಪರಶುರಾಮಪ್ಪ, ಇನ್‌ಸ್ಪೆಕ್ಟರ್ ಖರೀಂ, ಮೋಹನಕೃಷ್ಣ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.




