ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ: ಚಾಲಕ ಬಂಧನ

ಕಲಬುರಗಿ: ಸರ್ಕಾರ ಬಡ ವರ್ಗದವರಿಗೆ, ಶಾಲಾ ಮಕ್ಕಳಿಗೆ, ಬಾಣಂತಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಉಚಿತ ಅಕ್ಕಿ ನೀಡುತ್ತಿದೆ. ಆದ್ರೆ ಬಡವರ ಕೈ ಸೇರಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದು ಈ ಸೋರಿಕೆಯನ್ನ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಅನ್ನೋದಂತು ಕನ್ಪಾರ್ಮ್ ಆಗಿದೆ.
ಕಾಳ ಸಂತೆಯಲ್ಲಿ ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆ ಕಲಬುರಗಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮುಂದುವರೆದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಹೊಂದಿರುವ ಮಕ್ಕಳು, ಬಡತನ ರೇಖೆಗಿಂತ ಕೆಳಗಿರುವ ಹೆಚ್ಚಿನ ಜನರು ಇರುವ ಜಿಲ್ಲೆಗಳಲ್ಲಿ ಕಲಬುರಗಿಯೂ ಒಂದು. ಆದ್ರೆ ನಿಜವಾದ ಫಲನುಭವಿಗಳ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಮಾತ್ರ ಕಾಳ ಸಂತೆಯಲ್ಲಿ ಬಿಕರಿಯಾಗುತ್ತಿರೋದು ನಿಜಕ್ಕೂ ದುರದೃಷ್ಟಕರ ಸಂಗತಿ.
ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಫಜಲ್ಪುರ ಚೌಕ್ ಬಜಾರ್ ನಲ್ಲಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. 850 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದ ಪೊಲೀಸರು ಲಾರಿ ಚಾಲಕ ನವಾಜ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ.
ಅಫಜಲ್ಪುರ ಮಾರ್ಗವಾಗಿ ಮಹಾರಾಷ್ಟ್ರ ಸಾಗಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲಿ ಈ ರೀತಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಕ್ವಿಂಟಲ್ ಗಟ್ಟಲೆ ಅಕ್ಕಿ ಮಾರಾಟ ಮಾಡುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದರು. ಇಷ್ಟಾಗಿಯೂ ಆರೋಪಿಗಳು ಯಾವುದೇ ಹೆದರಿಕೆ ಇಲ್ಲದೆ ಸರ್ಕಾರಕ್ಕೆ ಮೋಸ ಮಾಡ್ತಿರೋದ್ರಿಂದ ಅಧಿಕಾರಿಗಳೇ ಇದರಲ್ಲಿ ಶಾಮಿಲಾಗಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.




