ಅಧಿಕಾರ ಸಿಗೋದೆ ಡೌಟು: ಕುರ್ಚಿಗಾಗಿ ಡಿಕೆಶಿ ಸಿದ್ದು ಫೈಟ್-ಇಬ್ರಾಹಿಂ ವ್ಯಂಗ್ಯ

ಕೋಲಾರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ 2ನೇ ಸ್ಥಾನಕ್ಕೆ ಹೋಗಿರುವುದು. ಇದೇ ಮಾದರಿ ರಾಜ್ಯದಲ್ಲಿ ಅನ್ವಯಿಸುತ್ತದೆ. ಹೀಗಿರುವಾಗ ಸಿ ಎಂ ಕುರ್ಚಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಕಿತ್ತಾಟ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯ ಮಾಡಿದರು.
ಕೋಲಾರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ ಎಂ ಇಬ್ರಾಹಿಂರವರು ನಾಳೆ 12 ಗಂಟೆಗೆ ನಾನು ಜೆಡಿಎಸ್ ಪಕ್ಷ ಸೇರಲಿದ್ದೇನೆ. ಈಗಾಗಲೇ ಕಾಂಗ್ರೆಸ್ ಪಕ್ಷ ತೊರೆದಿದ್ದೇನೆ ನಾವು ಮೂಲ ಕಾಂಗ್ರೆಸ್ಸಿಗರು ನಮ್ಮನ್ನು ಕಾಂಗ್ರೆಸ್ಸಿಗರು ಮೂಲೆ ಗುಂಪು ಮಾಡಿದ್ದಾರೆ. ನಮ್ಮ ತಂದೆ ತಾಯಿ ಅಜ್ಜ ಎಲ್ಲರೂ ಸ್ವತಂತ್ರ ಹೋರಾಟಗಾರರು ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. 1970 ರಿಂದ ಈಚೆಗೆ ಬಂದವರು ಮೂಲ ಕಾಂಗ್ರೆಸ್ಸಿಗರೇ ಅಲ್ಲ ಎಂದರು.
ನನಗೆ ಪಕ್ಷಕ್ಕಿಂತ ನಮ್ಮ ರಾಜ್ಯದವರು ಪ್ರಧಾನಿಯಾಗಿದ್ದ ದೇವೇಗೌಡರೇ ಮುಖ್ಯ. ಈಗಾಗಲೇ ನಮ್ಮ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ ಅದರಂತೆ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರುವ ಇಂಗಿತವನ್ನು ಸಿ ಎಂ ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ. ನಮ್ಮ ಮುಂದಿನ ನಿರ್ಧಾರದಂತೆ ಸರ್ಕಾರ ರಚನೆಯಾಗಲಿದೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ, ಈಗಿರುವಾಗ ಸಿ ಎಂ ಕುರ್ಚಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಕಿತ್ತಾಡಬೇಕೆ ಎಂದು ವ್ಯಂಗ್ಯ ಮಾಡಿದರು.
