ಕೆಎಂಎಫ್‌ನಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ: ನೂತನ ಅಧ್ಯಕ್ಷರಾಗಿ ಶಂಕರ ಮುಗದ ಆಯ್ಕೆ

ಧಾರವಾಡ : ಹಾವೇರಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿ ಒಳಗೊಂಡಿರುವ ಧಾರವಾಡದ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಬಸವರಾಜ ಅರಬಗೊಂಡ ವಿರುದ್ಧ ಇಂದು ಅವಿಶ್ವಾಸ ಮಂಡನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಶಂಕರ ಮುಗದ ಅವರು ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಬಸವರಾಜ ಅರಬಗೊಂಡ ಅವರ ವಿರುದ್ಧ 12 ನಿರ್ದೇಶಕರ ಪೈಕಿ 7 ಜನ ನಿರ್ದೇಶಕರು ಅವಿಶ್ವಾಸ ಮಂಡನೆ ಮಾಡಿದರು. ನಂತರ ನಡೆದ ಆಯ್ಕೆಯಲ್ಲಿ ಶಂಕರ ಮುಗದ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ಹಿಂದೆಯೂ ಶಂಕರ ಮುಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೂಲತಃ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಶಂಕರ ಮುಗದ ಅವರು ಹಲವು ವರ್ಷಗಳಿಂದ ಕೆಎಂಎಫ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಒಕ್ಕೂಟದ 12 ನಿರ್ದೇಶಕರಲ್ಲಿ, 7 ನಿರ್ದೇಶಕರು ಈಗ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಹಿ ಮಾಡಿದ ಹಿನ್ನೆಲೆಯಲ್ಲಿ, ಈ ಆಯ್ಕೆ ನಡೆದಿದ್ದು, ಅಂತಿಮವಾಗಿ ನೂತನ ಅಧ್ಯಕ್ಷ ಸ್ಥಾನ ಶಂಕರ ಮುಗದ ಅವರ ಪಾಲಾಗಿದೆ. 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅರಬಗೊಂಡ ಅವರು ಇಂದು ಅಧಿಕಾರ ಕಳೆದುಕೊಂಡರು.




