ಕೊಡಗಿನಲ್ಲಿ ಪಟಾಕಿ ಖರೀದಿ ಜೊರು : ಮನೆ ಮನಗಳಲ್ಲಿ ಸಂಭ್ರಮದ ದೀಪಾವಳಿ

ಕೊಡಗು : ಸರ್ವರಿಗೂ ಸನ್ಮಂಗಳವನ್ನು ತರಲಿ ಬೆಳಕಿನ ಹಬ್ಬ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಭಾರತದ ದೇಶದಲ್ಲಿ ಆಚರಿಸಲ್ಪಡುವ ಅತ್ಯಂತ ಸಡಗರದ ಹಬ್ಬಗಳಲ್ಲಿ ದೀಪಾವಳಿಗೆ ಪ್ರಮುಖ ಸ್ಥಾನವಿದೆ. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಹಲವು ಪೂಜೆಗಳ ಮೂಲಕ ದೇವರನ್ನು ಅರ್ಚಿಸಿ ಈ ಹಬ್ಬವನ್ನು ಆಚರಿಸಿ ಖುಷಿ ಪಡುತ್ತಾರೆ.
ಇದು ಬೆಳಕಿನ ಹಬ್ಬ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಅದೇ ಈ ದೀಪಾವಳಿಯ ಸಾರ. ರಂಗು ರಂಗಿನ ಹೊಸ ಉಡುಪು ದರಿಸಿ, ರುಚಿಕರ ಹಬ್ಬದೂಟ ಮತ್ತು ಸಿಹಿ ತಿಂಡಿಗಳು ಹಬ್ಬದ ಸಡಗರವನ್ನು ಇನ್ನಷ್ಟು ಇಮ್ಮಡಿಯಾಗಿಸುತ್ತವೆ. ಸಂಜೆಯ ವೇಳೆಗೆ ಚಿಣ್ಣರು, ಯುವಕರು, ಹಿರಿಯರು ಎಲ್ಲರೂ ಒಗ್ಗೂಡಿ ಪಟಾಕಿ ಸಿಡಿಸಿ ಹಬ್ಬದ ಆನಂದಕ್ಕೆ ಮತ್ತಷ್ಟು ಬೆರಗು ತರುತ್ತಾರೆ.
ಕೊಡಗಿನಲ್ಲಿ ಕೆಲ ವರ್ಷಗಳಿಂದ ದೀಪಾವಳಿ ಆಚರಣೆಗೆ ಪಟಾಕಿ ಒಡೆಯೋದು ತೀರಾ ಕಡಿಮೆಯಾಗಿದೆ. ಪ್ರಕೃತಿ ವಿಕೋಪ, ಕೊರೊನಾ ಹಾವಳಿ ಜೊತೆ ಜೊತೆಗೆ ಜಿಲ್ಲಾಡಳಿತ ಕೂಡ ಪಟಾಕಿ ಹೊಡೆಯದಂತೆ ಮನವಿ ಮಾಡಿ ಹಸಿರು ಪಟಾಕಿ ಹಚ್ಚಲು ತಿಳಿಸಿದೆ. ಜಿಲ್ಲೆಯ ಜನತೆ ಪಟಾಕಿ ಸಿಡಿಸುವ ಬದಲು ಹೆಚ್ಚಿನ ಸಂಖ್ಯೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸುತ್ತಿದ್ದಾರೆ. ಅದರ ಜೊತೆಗೆ ಈಗ ತರಾವರಿಯ ಕ್ಯಾಂಡಲ್ಗಳು ಕೊಡಗಿನ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ.
ಮಡಿಕೇರಿ ನಗರದ ಗಾಂಧಿ ಮೈದಾನ, ಹಾಗೂ ಜಿಲ್ಲೆಯ ವಿವಿದೆಡೆ ಪಟಾಕಿ ಅಂಗಡಿಗಳು ತಲೆ ಎತ್ತಿವೆ. ಮಕ್ಕಳು, ಹಿರಿಯರು ಸೇರಿದಂತೆ ಹಲವರು ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ.




