ಹೊನ್ನೂರು ಕೆರೆ ಕೋಡಿ ಎತ್ತರ; ರೈತರ ಬದುಕು ತತ್ತರ

ದಾವಣಗೆರೆ: ದಾವಣಗೆರೆ ತಾಲೂಕಿನ ಹೊನ್ನೂರು ಕೆರೆಯ ಕೋಡಿಯನ್ನು ಸುಮಾರು ಒಂದೂವರೆ ವರ್ಷಗಳ ಹಿಂದೆ ಮೂರರಿಂದ ನಾಲ್ಕು ಅಡಿ ಎತ್ತರ ಮಾಡಿರುವುದರಿಂದ ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸುಮಾರು 45 ವರ್ಷಗಳ ಹಿಂದೆ ಹೊನ್ನೂರು ಕೆರೆ ತುಂಬಿತ್ತು. ಆದರೂ ನೀರು ಜಮೀನುಗಳಲ್ಲಿ ನಿಂತಿರಲಿಲ್ಲ. ಕಡಿಮೆ ಆಳ ಇದ್ದ ಕಾರಣ ಕೋಡಿ ಬಿದ್ದಾಗ ಸುಮಾರು 15ರಿಂದ 20 ದಿನಗಳೊಳಗೆ ನೀರು ಹಿಂದಕ್ಕೆ ಹೋಗುತಿತ್ತು. ಆದ್ರೆ ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೊಗ್ಗನೂರು ಕೆರೆ, ಆನಗೋಡು, ಸಿದ್ದನೂರು ಕೆರೆ ಕೋಡಿ ಬಿದ್ದರಿಂದಾಗಿ ಎಲ್ಲಾ ಕೆರೆಗಳ ನೀರು ಹೊನ್ನೂರು ಕೆರೆಗೆ ಬಂದು ಸೇರುತ್ತದೆ. ಕೆರೆಯ ಮುಂಭಾಗ ಅಂದರೆ ದಕ್ಷಿಣ ದಿಕ್ಕಿನಲ್ಲಿರುವ ಆನಗೋಡು, ನೇರ್ಲಿಗೆ, ಬುಳ್ಳಾಪುರ, ಕರಿಲಕ್ಕೇನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಬೆಳೆದಿರುವ ಭತ್ತ, ಅಡಿಕೆ ಹಾಗೂ ತರಕಾರಿ ಬೆಳೆಗಳು ನೀರಿನಲ್ಲಿ ನಿಂತು ಕೊಳೆತು ಹೋಗಿ ನಷ್ವವಾಗಿದೆ.
ಕೆರೆಯ ಏರಿಯ ಹತ್ತಿರ ಎರಡು ತೂಬುಗಳಿವೆ. ಹಲವು ವರ್ಷಗಳಿಂದ ಇದ್ದ ಇದನ್ನು ಒಡೆದು ಹಾಕಿ ತೂಬುಗಳನ್ನು ಸಿಮೆಂಟ್, ಕಾಂಕ್ರೀಟ್ ಬಳಸಿ ನೀರು ಹೊರಹೋಗದಂತೆ ಹಾಗೆ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಜಮೀನಿನಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ, ಸಂಸದರು, ಮಾಯಕೊಂಡ ಶಾಸಕರು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈಗ ಎತ್ತರಿಸಲಾಗಿರುವ ಕೋಡಿಯನ್ನು ಕಡಿಮೆ ಮಾಡಬೇಕು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಮಲ್ಲಶೆಟ್ಟಿಹಳ್ಳಿ ಹಾಗೂ ನರಸೀಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ನಮ್ಮ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ. ನಮಗೆ ದಯವಿಟ್ಟು ಈ ಸಮಸ್ಯೆ ಪರಿಹರಿಸಿ ಸಹಾಯ ಮಾಡಬೇಕು. ಬೇರೆಯವರಿಗೆ ಅನುಕೂಲ ಮಾಡಿಕೊಡಲು ಹೋಗಿ ನಮಗೆ ಸಮಸ್ಯೆ ಆಗುವಂತೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಮಲ್ಲಶೆಟ್ಟಿಹಳ್ಳಿ ಗ್ರಾಮದಿಂದ ಹೊನ್ನೂರಿಗೆ ಶಾಲಾ ಮಕ್ಕಳು ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ. ಓಡಾಡಲು ದಾರಿ ಇದ್ದು, ಸರ್ಕಾರಿ ಆಸ್ಪತ್ರೆ, ಗಂಭೀರ ಸಮಸ್ಯೆ ಎದುರಿಸುತ್ತಿರುವವರನ್ನು ಕೂಡಲೇ ಕರೆದುಕೊಂಡು ಹೋಗಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನರು ಓಡಾಡುವ ದಾರಿ ಇದಾಗಿದ್ದು, ನೀರಿನಲ್ಲಿ ಸಂಪರ್ಕ ರಸ್ತೆ ಮುಳುಗಿ ಹೋಗಿದೆ. ಕಳೆದ ಮೂರು ತಿಂಗಳಿನಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಅಧಿಕಾರಿಗಳಿಗೆ ಗೊತ್ತಿದ್ದರೂ, ಗಮನಕ್ಕೆ ತಂದಿದ್ದರೂ ಕ್ರಮ ಮಾತ್ರ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ವಿಷ ಕುಡಿಯುವ ಪರಿಸ್ಥಿತಿ ಇದೆ:
ಇನ್ನು ಜಮೀನಿನಲ್ಲಿ ಮೂರ್ನಾಲ್ಕು ತಿಂಗಳಿನಿಂದ ನೀರು ನಿಂತಿರುವುದರಿಂದ ಬದುಕೇ ಬೇಡ ಎನಿಸಿದೆ. ಮಕ್ಕಳಿಗೆ ವಿಷವುಣಿಸಿ ಸಾಯಬೇಕೆನಿಸುತ್ತಿದೆ. ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಜಮೀನಿನಲ್ಲಿ ಬೆಳೆದ ಅಡಿಕೆ, ಮೆಕ್ಕೆಜೋಳ ಬೆಳೆ ನೀರಿನಲ್ಲಿ ನಿಂತು ಹಾಳಾಗಿದೆ. ನಷ್ಟ ಅನುಭವಿಸಿರುವ ನಾವು ಏನು ಮಾಡಬೇಕು. ಸಾಲಸೋಲ ಮಾಡಿ ಬೆಳೆ ಬೆಳೆದಿದ್ದೇವೆ. ಮುಂದೇನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಸಮಸ್ಯೆಯ ಬಗ್ಗೆ ಸಿರಿಗೆರೆ ಮಠದ ಶ್ರೀಗಳ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಶ್ರೀಗಳು ಬೇರೆಯವರಿಗೆ ಅನುಕೂಲ ಮಾಡಿಕೊಟ್ಟು ನಮಗೆ ಸಂಕಷ್ಟ ಆಗುವಂತೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.




