Mysore dasara-2021: ಜಂಬೂ ಸವಾರಿಗೆ ಗಜಪಡೆ ರೆಡಿ ಬಣ್ಣಬಣ್ಣದ ಅಲಂಕಾರದಿಂದ ಕಂಗೊಳಿಸುತ್ತಿರುವ ಗಜಪಡೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಮೈಮೇಲೆ ವರ್ಣರಂಜಿತ ಚಿತ್ರಗಳು ಬಹಳ ಸುಂದರವಾಗಿ ಮೂಡಿಬಂದಿದೆ.
ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ. ಅಲ್ಲದೇ ಅರಮನೆಯ ಒಳಗಡೆ ಮಾತ್ರ ಜಂಬೂದ್ವೀಪದ ಮಾಡಲಾಗುತ್ತಿದೆ. ಆನೆಗಳಿಗೆ ಕಲಾವಿದರಾದ ನಾಗಲಿಂಗಪ್ಪ ಬಡಿಗೇರಿ, ಅಣ್ಣ ನಾರಾಯಣ ಬಡಿಗೇರಿ, ತಮ್ಮ ಅರುಣ್ ಬಡಿಗೇರಿ, ಸ್ನೇಹಿತರಾದ ಮಧು, ರವಿ ಎಂಬುವರು 2004ರಿಂದ ನಿರಂತರವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಚಿತ್ರಕಲೆಯನ್ನು ಬಿಡಿಸುತ್ತಿದ್ದಾರೆ. ಆನೆಗಳ ದೇಹದ ಗಾತ್ರಕ್ಕೆ ಅನುಗುಣವಾಗಿ ಚಿತ್ರ ಬಿಡಿಸಲಾಗುತ್ತದೆ.
ಮುಖದ ಮಧ್ಯದಲ್ಲಿ ಗಂಡಭೇರುಂಡ, ಹಣೆಯ ಭಾಗಕ್ಕೆ ನಾಮ, ಕಿವಿಗೆ ಶಂಖ ಮತ್ತು ಚಕ್ರ, ಸೊಂಡಿಲಿಗೆ ಹೂ ಬಳ್ಳಿ, ಹಾರುವ ಪಕ್ಷಿ, ದಂತದ ಮೇಲ್ಭಾಗ, ನಾಲ್ಕು ಕಾಲುಗಳು ಮತ್ತು ಬಾಲ ಸೇರಿದಂತೆ ಅವುಗಳ ಅಕ್ಕಪಕ್ಕದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದಾರೆ. ಆನೆಗಳಿಗೆ ಸ್ನಾನ ಮಾಡಿಸಿದ ಬಳಿಕ ಸಂಪೂರ್ಣವಾಗಿ ದೇಹ ಒಣಗಲು ಬಿಟ್ಟು, ಆ ನಂತರ ಮೈಮೇಲಿನ ಬಿಳಿ ಚುಕ್ಕಿಗಳನ್ನು ಕಪ್ಪು ಬಣದಿಂದ ಮುಚ್ಚಲಾಗುತ್ತದೆ.
ಆ ಚುಕ್ಕಿಗಳು ಸೊಂಡಿಲು ಮತ್ತು ಕಿವಿ ಭಾಗದಲ್ಲಿ ಹೆಚ್ಚಾಗಿರುತ್ತವೆ. ಪ್ರತಿ ಆನೆಯ ಗಾತ್ರಕ್ಕೆ ತಕ್ಕಂತೆ ಚಿತ್ರಗಳು ಹಾಗೂ ಬಣ್ಣಗಳನ್ನು ಬಳಸಲಾಗುತ್ತದೆ. ಬಣ್ಣ ಬಳಿಯಲು ಬೊಂಬಿನಿಂದ ಮಾಡಿದ ವಿಶೇಷ ‘ಬ್ರಷ್’ ಬಳಸಲಾಗುತ್ತದೆ. ಅಂಬಾರಿ ಹೊರುವ ಆನೆಯನ್ನು ಐವರು ಕಲಾವಿದರು ಶೃಂಗರಿಸುತ್ತಾರೆ. ಇದಕ್ಕೆ ಕನಿಷ್ಟ 3 ರಿಂದ 4 ಗಂಟೆ ಸಮಯಾವಕಾಶ ಬೇಕಾಗುತ್ತದೆ. ಈಗಾಗಲೇ ಬಹುತೇಕ ಎಲ್ಲಾ ಆನೆಗಳಿಗೆ ವರ್ಣರಂಜಿತ ಚಿತ್ರ ಬಿಡಿಸಲಾಗಿದೆ.
ಇಂದು ಬೆಳಗಿನ ಜಾವ 3 ಗಂಟೆಯಿಂದಲೂ ಆನೆಗಳಿಗೆ ಬಣ್ಣ ಬಿಡಿಸುವ ಕಾರ್ಯ ಆರಂಭವಾಗಿದೆ. ಎಲ್ಲಾ ಆನೆಗಳನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ನೈಸರ್ಗಿಕವಾಗಿ ಸಿದ್ಧಪಡಿಸಿದ ವಿವಿಧ ಬಣ್ಣಗಳಿಂದ ವರ್ಣರಂಜಿತ ಚಿತ್ರ ಬಿಡಿಸಿ ಆನೆಗಳನ್ನು ಅಲಂಕಾರ ಮಾಡಲಾಗಿದೆ.




