ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹು-ಧಾ ಅವಳಿ ನಗರದಲ್ಲಿ ಹೆಚ್ಚಾದ ಸೈಬರ್ ಪ್ರಕರಣಗಳು: ಲೋನ್ ಕೊಡಿಸುವುದಾಗಿ ನಂಬಿಸಿ 1.50 ಲಕ್ಷ ದೋಖಾ

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಇತ್ತೀಚೆಗೆ ಸೈಬರ್​ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿವೆ. ಅಪರಿಚಿತನೊಬ್ಬ ಲೋನ್ ನೀಡುವುದಾಗಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ 1.50 ಲಕ್ಷ ವರ್ಗಾಯಿಸಿಕೊಂಡು ಹುಬ್ಬಳ್ಳಿಯಲ್ಲಿ ವಂಚಿಸಿದರೆ, ಮತ್ತೊಬ್ಬರಿಗೆ ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ಎಗರಿಸಿದ ಘಟನೆ ಧಾರವಾಡದಲ್ಲಿ ವರದಿಯಾಗಿವೆ.

ನಗರದ ನಾರಾಯಣಪುರದ ಶ್ರೀಶೈಲ ಬಲ್ಲೂರಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ತಾನು ಆರ್ಮಿ ಕಚೇರಿಯಿಂದ ಮಾತನಾಡುತ್ತಿದ್ದೇನೆ, ಎನ್‌ಎಸ್‌ಎಸ್ ಕ್ಯಾಂಪ್‌ಗೆ 22 ಚೀಲ ಗೋಧಿ ಹಿಟ್ಟು ಬೇಕಿದೆ ಎಂದು ತಿಳಿಸಿ ವಿಳಾಸವೊಂದನ್ನು ನೀಡಿದ್ದಾನೆ.

ನಂತರ ಮತ್ತೊಬ್ಬ ಕರೆ ಮಾಡಿ, ಗೋಧಿ ಹಿಟ್ಟಿನ ಹಣ ಪಾವತಿಸುತ್ತೇನೆಂದು ತಿಳಿಸಿ ಬಲ್ಲೂರ ಅವರ ಫೋನ್ ಪೇ ನಂಬರ್ ಪಡೆದಿದ್ದಾನೆ. ವಾಟ್ಸ್ ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡಿ ಯುಪಿಐ ಪಿನ್ ಹಾಕುವಂತೆ ತಿಳಿಸಿದ್ದಾನೆ. ಅವನ ಮಾತು ನಂಬಿ ಯುಪಿಐ ಪಿನ್​ ನೀಡಿದಾಗ 59,075 ರೂಪಾಯಿ ಹಣ ವಂಚನೆಗೀಡಾಗಿದ್ದು ಗೊತ್ತಾಗಿದೆ. ಈ ಬಗ್ಗೆ ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೋನ್ ಕೋಡಿಸುವುದಾಗಿ ನಂಬಿಸಿ 1.50 ಲಕ್ಷ ರೂಪಾಯಿ ದೋಖಾ:

ಧಾರವಾಡದ ಜೈಭೀಮ ನಗರದ ಕೃಷ್ಣ ಕಟ್ಟಿಮನಿ ಎನ್ನುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಲೋನ್​ ನೀಡುವುದಾಗಿ ತಿಳಿಸಿದ್ದಾನೆ. ವಿಳಾಸ ದಾಖಲೆ, ಬ್ಯಾಂಕ್​ ಖಾತೆ, ಎಟಿಎಂ ಮತ್ತಿತರ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ನಂತರ ವಾಟ್ಸ್ ಆ್ಯಪ್ ನಂಬರ್ ಪಡೆದು ಎರಡು ಲಿಂಕ್ ಕಳುಹಿಸಿ, ಅದರಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಬಳಿಕ ನಿಮ್ಮ ಇಂಟರ್‌ನೆಟ್ ನಿಧಾನವಾಗಿದೆ. ನನ್ನ ನಂಬರ್‌ನಿಂದ ಅರ್ಜಿ ಸಲ್ಲಿಸುತ್ತೇನೆ ಎಂದು ಮತ್ತೊಂದು ಲಿಂಕ್ ಕಳುಹಿಸಿ, ನಂತರ ವಿವಿಧ ಶುಲ್ಕದ ನೆಪ ಹೇಳಿ ಹಂತ ಹಂತವಾಗಿ 1.50 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದು, ಈ ಕುರಿತು ಹುಬ್ಬಳ್ಳಿ‌ ಧಾರವಾಡ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button