ಹೊನ್ನಾವರ ಬ್ಲಾಕ್ ಕಾಂಗ್ರೆಸ್ನಿಂದ ಮನೆ ಮನೆ ಭೇಟಿ

ಕಾರವಾರ : ಕಾಂಗ್ರೆಸ್ ಪಕ್ಷ ಕೋವಿಡ್ – 19 ರಿಲೀಫ್ ಟಾಸ್ಕ್ ಪೋರ್ಸ್ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಾಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್‌ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು.
ಅವರು ಇಂದು ಹೊನ್ನಾವರ ಪಟ್ಟಣದ ಗಾಂಧಿ ನಗರದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ “ಕೋವಿಡ್ – 19 ಸಹಾಯ ಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೆಪಿಸಿಸಿ ನಿರ್ದೇಶನದಂತೆ ಮುಂದಿನ ಮೂವತ್ತು ದಿನಗಳ ಕಾಲ ಪ್ರತಿ ಪಟ್ಟಣ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ “ಕೋವಿಡ್ – 19 ಸಹಾಯ ಹಸ್ತ” ಅಭಿಯಾನ ನಡೆಯಲಿದ್ದು, ಈ ಕುರಿತಂತೆ ಬ್ಲಾಕ್ ಮಟ್ಟದಲ್ಲಿ 10 ಮುಖಂಡರ ತಂಡವನ್ನೊಳಗೊಂಡ ವಾರಿಯರ್ಸ್ ಗ್ರೂಪ್ ರಚಿಸಲಾಗಿದೆ ಎಂದರು.
ಪ್ರತಿ ದಿನ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಬರುವ 15 ಮನೆಗಳಿಗೆ ವಾರಿಯರ್ಸಗಳು ಭೇಟಿ ನೀಡಿ ಕೆಪಿಸಿಸಿ ನಿಗದಿ ಪಡಿಸಿದ “ಸಹಾಯಹಸ್ತ ನಮೂನೆ”ಯಲ್ಲಿ ಮಾಹಿತಿ ಸಂಗ್ರಹಿಸಿ ಕೆಪಿಸಿಸಿ ಟಾಸ್ಕ್ ಪೋರ್ಸ್ಗೆ ರವಾನಿಸಿ, ತೊಂದರೆಗೊಳಗಾದ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಬಿಸಿಸಿ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ತಿಳಿಸಿದರು.
ಪ್ರತಿ ಪಂಚಾಯತ ಘಟಕಗಳ ಅಧ್ಯಕ್ಷರೇ“ಹೆಲ್ತ್ ವಾರಿಯರ್ಸ್” ಗಳಾಗಿ ಕಾರ್ಯನಿರ್ವಹಿಸುತ್ತಿದ್ದು,ಉಸ್ತುವಾರಿಗಳಾಗಿ ಪಕ್ಷದ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ,ವಿನೋದ ನಾಯ್ಕ ಕರ್ಕಿ, ದಾಮೋದರ ನಾಯ್ಕ ಹಳದೀಪುರ, ಸುರೇಶ ಪಟಗಾರ ನವೀಲಗೋಣ, ಕೆ.ಎಚ್.ಗೌಡ ಚಂದಾವರ, ಮಂಜುನಾಥ ಭಟ್ಟ ಕಡ್ಲೆ, ಗಜಾನನ ನಾಯ್ಕ ಸಾಲ್ಕೋಡ, ಸಂದೇಶ ಶೆಟ್ಟಿ ಹೊಸಾಕುಳಿ, ರವಿ ಶೆಟ್ಟಿ ಕವಲಕ್ಕಿ, ಕೇಶವ ಮೇಸ್ತ ಹೊನ್ನಾವರ ಇವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.




