ರೈತರಿಂದ ಉಚಿತ ವಿದ್ಯುತ್ ಗಾಗಿ ಬೇಡಿಕೆ : ಉಸ್ತುವಾರಿ ಸಚಿವರಿಗೆ ಮನವಿ

ಕೊಡಗು : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ಕೋವಿಡ್ ಲಾಕ್ ಡೌನ್ ನಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕು ಮತ್ತು ಹಳೇ ಬಾಕಿ ಇರುವ ಬಿಲ್ಲನ್ನು ಮನ್ನಾ ಮಾಡಬೇಕೆಂದು ಕೊಡಗು ಕಾಫಿ ಬೆಳೆಗಾರರು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಸಚಿವ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದ ಕಾಫಿ ಬೆಳೆಗಾರರು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಮಳೆಯಿಂದ ಕಾಫಿ ಫಸಲು ಹಾನಿಯಾಗಿದ್ದು, ಗಿಡಗಳು ರೋಗಗಳಿಗೆ ತುತ್ತಾಗಿವೆ. ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳೆಗಾರರ 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಐ.ಪಿ. ಸೆಟ್ ಪಂಪ್ ಬಳಕೆದಾರರಿಗೆ 10 ಹೆಚ್‍ಪಿ ಉಚಿತವಾಗಿ ಉಪಯೋಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಪ್ರತಿ ಬಿಲ್ಲನ್ನು ಪಾವತಿ ಮಾಡಬೇಕಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮಕ್ಕೆ ತಂದ ನಂತರ ಬೇರೆ ಜಿಲ್ಲೆಗೆ ಯಾವ ರೀತಿ ಉಚಿತವಾಗಿ ನೀಡಿದ್ದಾರೆ ಅದೇ ಮಾದರಿಯಲ್ಲಿ ಕೊಡಗಿಗೂ ಆದೇಶ ಮಾಡಿದ್ದಾರೆ. ಆದರೆ ಈವರೆಗೆ ಆದೇಶ ಕಾರ್ಯಗತವಾಗಿಲ್ಲ ಎಂದು ಪ್ರಮುಖರು ಆರೋಪಿಸಿದರು. ಹಳೇ ಬಾಕಿ ಇರುವ ಬಿಲ್ಲನ್ನು ಕೂಡ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.




