ಮಸೀದಿ ಅಧ್ಯಕ್ಷ ದೇಗುಲದಲ್ಲಿ ಸೇವಾಕಾರ್ಯ ಮಾಡಿದ್ದಕ್ಕೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ; ಗಲಾಟೆ ಎಬ್ಬಿಸಿ ಹಲ್ಲೆ ಮಾಡಿರುವ ಆರೋಪ

ಚಿಕ್ಕಮಗಳೂರು: ಮಸೀದಿ ಅಧ್ಯಕ್ಷನೋರ್ವ ದೇಗುಲವೊಂದರ ಉದ್ಘಾಟನೆ ಸಂದರ್ಭದಲ್ಲಿ ದೇಗುಲ ಪ್ರವೇಶಿಸಿ, ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಕ್ಕೆ ಆಕ್ಷೇಪಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿರುವುದು ಮತ್ತು ಸಿಟ್ಟಿಗೆದ್ದ ಅಧ್ಯಕ್ಷ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಜಾಮಿಯಾ ಮಸೀದ ಅಧ್ಯಕ್ಷ ಸಿ ಎನ್ ಅಕ್ಮಲ್ ರಾಮನಹಳ್ಳಿಯ ನೂತನ ಆಂಜನೇಯ ಸ್ವಾಮಿ ದೇಗುಲ ಉದ್ಘಾಟನೆ ವೇಳೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿರುವುದು ಮತ್ತು ಅರ್ಚಕರು ನೀಡಿದ್ದ ಆರತಿಯನ್ನು ತೆಗೆದುಕೊಂಡಿದ್ದ ಕಾರಣಕ್ಕೆ ಮಸೀದಿ ಅಧ್ಯಕ್ಷ ಪಟ್ಟದಿಂದ ಪದಚ್ಯುತಿಗೊಳಿಸಲಾಗಿತ್ತು ಎನ್ನಲಾಗಿದೆ. ಇದಕ್ಕೆ ಸಿಟ್ಟಿಗೆದ್ದಅಧ್ಯಕ್ಷ ಸಿ ಎನ್ ಅಕ್ಮಲ್ ವಕ್ಫ್ ಬೋರ್ಡ್ ಕಚೇರಿಗೆ ತೆರಳಿ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ
ಅಕ್ಮಲ್ ಮತ್ತಿತರರು ಜಿಲ್ಲಾ ವಕ್ಫ್ ಬೋರ್ಡ್ ಕಚೇರಿಗೆ ತೆರಳಿ ಆಡಳಿತಾಧಿಕಾರಿ ಹಾಗೂ ಇತರರನ್ನು ತರಾಟೆಗೆ ತೆಗೆದುಕೊಂಡಿದ್ದೇ ಅಲ್ಲದೆ ನಮಾಜ್ ಮುಗಿಸಿಕೊಂಡು ಬರುತ್ತಿದ್ದ ಗುರುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಕ್ಮಲ್ ಬೇಷರತ್ ಕ್ಷಮೆ ಕೇಳಬೇಕೆಂದು ಮಸೀದಿಯ ಮುಖ್ಯಸ್ಥರು ಒತ್ತಾಯಿಸಿದ್ದಾರೆ.
ಈ ಮಧ್ಯೆ ಅಕ್ಮಲ್ ಪ್ರತಿಕ್ರಿಯಿಸಿ, ಕಮಿಟಿಯ ಕೆಲವರು ಪಿತೂರಿ ನಡೆಸಿ ನನಗೆ ನೋಟಿಸನ್ನೂ ನೀಡದೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ರಾಮನಹಳ್ಳಿ ಆಂಜನೇಯ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ಆರತಿ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.




