ಸ್ಮಶಾನ ಭೂಮಿ ಒತ್ತುವರಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಬೇಲಿ ಕಿತ್ತುಹಾಕಿ ಪ್ರತಿಭಟನೆ

ಚಿಕ್ಕಮಗಳೂರು: ಗ್ರಾಮದ ಸ್ಮಶಾನ ಭೂಮಿಯನ್ನು ಪ್ರಭಾವಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿ ಬೇಲಿ ಹಾಕಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಂತಿ ಬೇಲಿಯನ್ನು ಕಿತ್ತುಹಾಕಿದ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.
ಮೆಣಸೆ ಗ್ರಾಪಂ ವ್ಯಾಪ್ತಿಯ ಕರ್ಕೆ ಗ್ರಾಮದ ಸ.ನಂ.156ರಲ್ಲಿ ಭೂಮಿಯನ್ನು ಸ್ಮಶಾನಕ್ಕಾಗಿ ಅನಾದಿ ಕಾಲದಿಂದ ದಲಿತ ಕುಟುಂಬಗಳು ಬಳಸುತ್ತಿದ್ದವು. ಈ ಭೂಮಿಯ 30 ಎಕರೆಗೂ ಹೆಚ್ಚು ಭಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿದ್ದರು. ತಾಲೂಕು ಆಡಳಿತಕ್ಕೆ, ಪೊಲೀಸರಿಗೆ ಅನೇಕ ಬಾರಿ ದೂರು ನೀಡಿದ್ದರೂ ಒತ್ತುವರಿ ತೆರವು ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಜನಶಕ್ತಿ ಸಂಘಟನೆ ಹಾಗೂ ಬಹುಜನ ಸಮಾಜ ಪಕ್ಷದ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಬೇಲಿಯನ್ನು ಕಿತ್ತು ಹಾಕಿದರು.
ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ರಾಮು ಕೌಳಿ, ಬಿಎಸ್ಪಿಯ ಆನಂದ್, ವೆಂಕಟೇಶ್ ಕೆಳಕೊಪ್ಪ, ಗಡಿಕಲ್ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.




