ಕಾರ್ ಸಮೇತ ಭದ್ರಾ ನಾಲೆಗೆ ಹಾರಿದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ?

ಚಿಕ್ಕಮಗಳೂರು: ಒಂದೇ ಕುಟುಂಬದ ನಾಲ್ವರು ಸಂಚರಿಸುತ್ತಿದ್ದ ಕಾರು ಭದ್ರಾ ನಾಲೆಯೊಳಗೆ ಬಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಇನ್ನಿಬ್ಬರು ಕಣ್ಮರೆಯಾಗಿರುವ ಘಟನೆ ತರೀಕೆರೆ ಸಮೀಪದ ಎಂ ಸಿ ಹಳ್ಳಿಯಲ್ಲಿ ನಡೆದಿದೆ. ಕಾರಿನಲ್ಲಿ ಬಂದವರು ಆತ್ಮಹತ್ಯೆಗೆ ಯತ್ನಿಸಿ ಈ ದುರಂತಕ್ಕೆ ಕಾರಣರಾಗಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಸ್ವಿಫ್ಟ್ ಕಾರಿನಿಂದ ಬಂದಿದ್ದ ಕುಟುಂಬದ ಮಂಜು ಹಾಗೂ ಪತ್ನಿ ನೀತಾ, ಪುತ್ರ ಧ್ಯಾನ್ ಹಾಗೂ ಮಂಜು ತಾಯಿ ಸುನಂದಮ್ಮ ನಾಲ್ವರು ಎಂ ಸಿ ಹಳ್ಳಿ ಬಳಿ ಭದ್ರಾನಾಲೆಗೆ ಕಾರಿನ ಸಮೇತ ಹಾರಿದ್ದಾರೆ. ಇದಕ್ಕೂ ಮೊದಲು ತಾವು ಮಾನಸಿಕವಾಗಿ ನೊಂದಿದ್ದೇವೆಂದು ಸಂಬಂಧಿಕರಿಗೆ ಮೊಬೈಲ್ ಫೋನ್‌ವೊಂದರಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ನಾಲ್ವರೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿಯೇ ಬಂದಿದ್ದರೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಮೂಲದ ನೀತಾ ಎಂಬುವರನ್ನು ಬೆಂಗಳೂರಿಗೆ ಮದುವೆ ಮಾಡಿಕೊಡಲಾಗಿತ್ತು. 35 ವರ್ಷದ ನೀತಾ ಹಾಗೂ 13 ವರ್ಷದ ಪುತ್ರ ಧ್ಯಾನ್ ಸಾವಿನಿಂದ ಪಾರಾಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಅರ್ಧ ಮುಳುಗಿದ ಸ್ಥಿತಿಯಲ್ಲಿದ್ದ ಕಾರಿನಿಂದ ಮಂಜು ಹಾಗೂ ತಾಯಿ ಸುನಂದಮ್ಮ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಎಸ್‌ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಾಪತ್ತೆ ಆದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




