ಕಂದಾಯ ನಿರೀಕ್ಷಕ ಆತ್ಮಹತ್ಯೆ; ಡೆತ್ನೋಟ್ನಲ್ಲಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಚಿಕ್ಕಮಗಳೂರು: ಅಕ್ರಮ ಸಕ್ರಮ ಸಮಿತಿಯವರಿಂದ ಸ್ಮಶಾನ ಭೂಮಿ ಒತ್ತುವರಿ ಸಂಬಂಧ ಒತ್ತಡ ಹಾಕಿದ್ದಾರೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಂದಾಯ ಇಲಾಖೆ ನೌಕರರ ಸಂಘ ಪೊಲೀಸರನ್ನು ಒತ್ತಾಯಿಸಿದೆ.
ಲಕ್ಕವಳ್ಳಿ ಕಂದಾಯ ನಿರೀಕ್ಷಕ ಸೋಮಶೇಖರ್ (45) ಅಕ್ರಮ ಸಕ್ರಮ ಸಮಿತಿಯ ಕೆಲವರ ಕಿರುಕುಳಕ್ಕೆ ನೊಂದು ಡೆತ್‌ನೋಟ್ ಬರೆದಿಟ್ಟು ಆ.25ರಂದು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ರಮ ಸಕ್ರಮ ಸಮಿತಿಯ ಕೆಲ ವ್ಯಕ್ತಿಗಳ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಧನಪಾಲ್, ರಮೇಶ್ ಹಾಗೂ ಸಂಜೀವ್ ಕುಮಾರ್ ಎಂಬವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದು, ಇವರೆಲ್ಲ ಬಿಜೆಪಿ ಕಾರ್ಯಕರ್ತರು ಎನ್ನಲಾಗುತ್ತಿದೆ. ಸ್ಮಶಾನ ಭೂಮಿ ಒತ್ತುವರಿ ತೆರವು ಮಾಡದಂತೆ ಇವರು ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಮಶಾನ ಭೂಮಿ ಸಹಿತ ವಿವಿಧೆಡೆ ಸರ್ಕಾರಿ ಭೂಮಿಯ ಒತ್ತುವರಿ ತೆರವು ಮಾಡುವ ಬದಲು ಅದನ್ನು ಅಕ್ರಮ ಮಾಡುವಂತೆ ಸಮಿತಿಯ ಸದಸ್ಯರು ಸೋಮಶೇಖರ್ ಅವರ ಮೇಲೆ ಒತ್ತಡ ಹಾಕುತ್ತಾ ಬೆದರಿಕೆ ಹಾಕಿದ್ದಾರೆ. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೋಮಶೇಖರ್ ತನ್ನ ಪತ್ನಿ ಹಾಗೂ ಮಗಳನ್ನು ಅಗಲಿದ್ದು, ಘಟನೆ ಸಂಬಂಧಿಸಿದಂತೆ ಕಂದಾಯ ಇಲಾಖೆ ನೌಕರರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿ, ಕರ್ತವ್ಯದ ವೇಳೆ ಕಪ್ಪುಪಟ್ಟಿ ಧರಿಸುವುದರೊಂದಿಗೆ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಕಿರುಕುಳದ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ನೌಕರರ ಸಂಘದವರು ಪೊಲೀಸರನ್ನು ಒತ್ತಾಯಿಸಿದ ಮೇಲೆ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




