ಕಂದಾಯ ನಿರೀಕ್ಷಕ ಆತ್ಮಹತ್ಯೆ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಪ್ರತಿಭಟನೆ

ಚಿಕ್ಕಮಗಳೂರು: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಲಕ್ಕವಳ್ಳಿಯ ಕಂದಾಯ ನಿರೀಕ್ಷಕ ಸೋಮಶೇಖರ್ ಸಾವಿಗೆ ಕಾರಣಕರ್ತರಾದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಕಂದಾಯ ಇಲಾಖೆ ನೌಕರರು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು.
ಗೋಮಾಳ ಹಾಗೂ ಸ್ಮಶಾನ ಭೂಮಿ ಒತ್ತುವರಿ ವಿಷಯದಲ್ಲಿ ಮೂವರು ವ್ಯಕ್ತಿಗಳು ಸೋಮಶೇಖರ್ಗೆ ಒತ್ತಡ ಹೇರಿ, ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಡೆತ್ನೋಟ್ನಲ್ಲಿ ಬರೆದಿರುವ ಧನಪಾಲ್, ರಮೇಶ್ ಹಾಗೂ ಸಂಜು ಎಂಬುವವರನ್ನು ತಕ್ಷಣ ಬಂಧಿಸಿ, ನ್ಯಾಯ ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆಯಿಂದ ಇಲಾಖೆಯ ನೌಕರರ ಮಾನಸಿಕ ಸ್ಥೈರ್ಯ ಕುಸಿದಂತಾಗಿದೆ. ಕಾನೂನು ಬಾಹಿರ ಕೆಲಸವನ್ನು ಮಾಡಿಸಲು ಕೆಲವರು ಹೆಚ್ಚಿನ ಒತ್ತಡವನ್ನು ನೌಕರರ ಮೇಲೆ ಹೇರುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ರೂಪ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಸ್ಥಳಕ್ಕಾಗಮಿಸಿದ್ದರು. ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಓಂಕಾರಸ್ವಾಮಿ, ಜಿಲ್ಲಾಧ್ಯಕ್ಷ ದೇವೇಂದ್ರ, ಪದಾಧಿಕಾರಿಗಳಾದ ಸತ್ಯನಾರಾಯಣ, ಚಂದ್ರಪ್ಪ, ಶಿವಕುಮಾರ್, ಸಿದ್ಧಮೂರ್ತಿ, ವಸಂತಕುಮಾರ್, ಹೇಮಂತ್, ರಾಜ್ಯ ಸಮಿತಿಯ ಸತ್ಯನಾರಾಯಣ್ ಮತ್ತಿತರರು ಇದ್ದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ:
ಸೋಮಶೇಖರ್ ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ತಿಳಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಇಲಾಖೆಯ ನೌಕರರು ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳಬಹುದು. ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಜಿಲ್ಲಾಡಳಿತದ ರಕ್ಷಣೆ ಇರುತ್ತದೆ. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗುವುದು ಎಂದರು.




